ನವದೆಹಲಿ: ಕೆಲವು ದಿನಗಳ ಹಿಂದೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡಾಗ, ಅದರಲ್ಲೂ ಕೋವಿಶೀಲ್ಡ್ ತೆಗೆದುಕೊಂಡಾಗ ಕೆಲವರಲ್ಲಿ ಜ್ವರ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವರು ಜ್ವರ ನಿವಾರಕ ಪ್ಯಾರಾಸಿಟಾಮಲ್ ಅಥವಾ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಕೋವಾಕ್ಸಿನ್ ಲಸಿಕೆ ಪಡೆದುಕೊಂಡವರಿಗೆ ಇಂತಹ ಮಾತ್ರೆಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
ಪ್ರಸ್ತುತ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದ್ದು, ಕೆಲವು ಕೇಂದ್ರಗಳಲ್ಲಿ ಲಸಿಕೆ ತೆಗೆದುಕೊಂಡ ಮಕ್ಕಳಿಗೆ ಪ್ಯಾರಾಸಿಟಾಮಲ್ 500 ಎಂಜಿ ಮೂರು ಮಾತ್ರೆಗಳು ಶಿಫಾರಸು ಮಾಡುತ್ತಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಯೋಟೆಕ್ ಅಂತಹ ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದೆ.
ಇತರ ಕೋವಿಡ್ ಲಸಿಕೆಗಳನ್ನು ತೆಗೆದುಕೊಂಡ ನಂತರ ಪ್ಯಾರಾಸಿಟಾಮಲ್ ತೆಗೆದುಕೊಳ್ಳಲು ಶಿಫಾರಸು ಮಾಡಲಾಗುತ್ತದೆ. ಆದರೆ ಕೋವಾಕ್ಸಿನ್ ತೆಗೆದುಕೊಡ ನಂತರ ಪ್ಯಾರಾಸಿಟಾಮಲ್ ಸೇರಿದಂತೆ ನೋವು ನಿವಾರಕ ಮಾತ್ರೆಗಳ ಅಗತ್ಯ ಇರುವುದಿಲ್ಲ ಎಂದಿದೆ.
ಈ ಕುರಿತು 30 ಸಾವಿರ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಶೇಕಡಾ 10ರಿಂದ 20ರಷ್ಟು ವ್ಯಕ್ತಿಗಳಲ್ಲಿ ಮಾತ್ರ ತೀವ್ರ ಜ್ವರ ಅಥವಾ ನೋವು ಕಂಡು ಬರುತ್ತದೆ. ಬಹುತೇಕ ಮಂದಿಯಲ್ಲಿ ಸ್ವಲ್ಪ ಮಟ್ಟಿಗೆ ಜ್ವರ ಕಂಡು ಬರುತ್ತದೆ. ಎರಡು ಅಥವಾ ಮೂರು ದಿನಗಳ ಬಳಿಕ ತಾನಾಗಿಯೇ ವಾಸಿಯಾಗುತ್ತದೆ. ಯಾವುದೇ ಅಗತ್ಯ ಇರುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
ಒಂದು ವೇಳೆ ನಿಮಗೆ ತೀವ್ರ ಜ್ವರ ಕಂಡುಬಂದರೆ, ವೈದ್ಯರನ್ನು ಸಂಪರ್ಕಿಸಬೇಕು ಎಂದು ಭಾರತ್ ಬಯೋಟೆಕ್ ಸಲಹೆ ನೀಡಿದೆ. ಕೋವಾಕ್ಸಿನ್ ಲಸಿಕೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯಾಗಿದೆ.
ಇದನ್ನೂ ಓದಿ: UKಯಲ್ಲಿ ಕೋವಿಡ್ ರುದ್ರತಾಂಡವ: ಒಂದೇ ದಿನ 1,94,747 ಕೋವಿಡ್ ಪಾಸಿಟಿವ್