ನವದೆಹಲಿ: ಅಸ್ಸೋಂನಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಮೂರನೇ ಹಂತದ ಮತದಾನ ಏಪ್ರಿಲ್ 6ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರ ವಾಕ್ಸಮರ ತಾರಕಕ್ಕೇರಿದೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಚುನಾವಣಾ ಪ್ರಚಾರದ ಕಣದಲ್ಲಿದ್ದು, ಅಸ್ಸೋಂನಲ್ಲಿ ದಾಡಿ, ಟೋಪಿ, ಲುಂಗಿವಾಲಾಗಳ ಸರ್ಕಾರ ಬರುವುದಿಲ್ಲ ಎಂದು ಹೇಳಿದ್ದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ನ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವರು ಹೀಗೆ ಹೇಳಿದ್ದೇಕೆ..?
ಚುನಾವಣಾ ಪ್ರಚಾರ ನಡೆಯುತ್ತಿದ್ದ ವೇಳೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ನ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಮಗನಾದ ಅಬ್ದುರ್ ರಹೀಮ್ ಈ ಬಾರಿ ದಾಡಿ, ಟೋಪಿ, ಲುಂಗಿವಾಲಾಗಳ ಸರ್ಕಾರ ಅಸ್ಸೋಂನಲ್ಲಿ ಬರಲಿದೆ ಎಂದಿದ್ದರು. ಈ ಹೇಳಿಕೆಗೆ ಗಿರಿರಾಜ್ಸಿಂಗ್ ಪ್ರತಿಕ್ರಿಯಿಸಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಗಿರಿರಾಜ್ ಸಿಂಗ್ ಭಾರತ ಸನಾತನ ಧರ್ಮದ ದೇಶವಾಗಿದ್ದು, ಜೈ ಶ್ರೀರಾಮ್ ಮತ್ತು ಹರೇ ಹರೇ ಘೋಷಣೆಗಳು ದೇಶಾದ್ಯಂತ ಮೊಳಗುತ್ತವೆ ಎಂದಿದ್ದಾರೆ. ಇದರ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಸಬ್ ಕಾ ಸಾಥ್ ಎಂಬುದನ್ನು ದೇಶದ ಎಲ್ಲರೂ ಅರಿತುಕೊಳ್ಳಬೇಕು ಎಂದಿದ್ದಾರೆ.