ನವದೆಹಲಿ: ಚೀನಿ ಪಡೆಗಳು ಭಾರತದ ಗಡಿ ಪ್ರವೇಶಿದ್ದವು. ಸ್ಥಳೀಯರು ಮತ್ತು ಐಟಿಬಿಪಿ ಸಿಬ್ಬಂದಿ ಹಸ್ತಕ್ಷೇಪದಿಂದಾಗಿ ಹಿಂದಕ್ಕೆ ಸರಿದವು ಎಂದು ಹೇಳಲಾದ ವಿಡಿಯೋ ನಿಜವಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟನೆ ನೀಡಿವೆ.
ಸ್ಥಳೀಯ ನಾಗರಿಕ ಸಮಸ್ಯೆಯ ಹಳೆಯ ವಿಡಿಯೋ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಚಾರವನ್ನು ಸ್ಥಳೀಯ ನಾಗರಿಕ ಆಡಳಿತ ನೋಡಿಕೊಳ್ಳುತ್ತದೆ. ಆದರೆ ಯಾವುದೇ ಚೀನಿ ಪಡೆಗಳು ಭಾರತದ ಗಡಿ ಪ್ರವೇಶಿಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲಡಾಖ್ನಲ್ಲಿ ಭಾರತದ ಗಡಿ ಪ್ರವೇಶಿಸಿದವಾ ಚೀನಾ ವಾಹನಗಳು? ವಿಡಿಯೋ ವೈರಲ್
ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಲೇ ಇದೆ. ಉಭಯ ರಾಷ್ಟ್ರಗಳ ಸ್ಥಳೀಯರು ತಮ್ಮ ಸಾಕು ಪ್ರಾಣಿಗಳ ಜೊತೆ ಆ ಪ್ರದೇಶದಲ್ಲಿ ಸಂಚರಿಸುತ್ತಾರೆ ಮತ್ತು ಕೆಲವೊಮ್ಮೆ ಗಡಿಯಾಚೆ ಹೋಗುತ್ತಾರೆ. ಇದರ ಬಗ್ಗೆ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಅಧಿಕಾರಿಗಳಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಚೀನಾದ ಎರಡು ವಾಹನಗಳು ಲಡಾಖ್‌ನ ಲೇಹ್ ಜಿಲ್ಲೆಯ ನ್ಯೋಮಾ ಬ್ಲಾಕ್‌ನ ಚಾಂಗ್‌ಥಾಂಗ್ ಪ್ರದೇಶಕ್ಕೆ ಬಂದಿವೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 5 ನಿಮಿಷ 26 ಸೆಕೆಂಡುಗಳ ವೈರಲ್ ವಿಡಿಯೋದಲ್ಲಿ ಕೆಲ ವ್ಯಕ್ತಿಗಳು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿ ಸ್ಥಳೀಯರೊಂದಿಗೆ ವಾದ ನಡೆಸುತ್ತಿರುವ ದೃಶ್ಯ ಕಂಡುಬಂದಿತ್ತು.