ಪಾಟ್ನಾ: ಬಿಹಾರ ಸಿಎಂ ಹಾಗೂ INDIA ಕೂಟದ ಪ್ರಮುಖ ನೇತಾರ ನಿತೀಶ್ ಕುಮಾರ್ ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಿತೀಶ್ ಕುಮಾರ್, ಮೋದಿ ಅವರನ್ನು 2024 ರ ಚುನಾವಣೆಯಲ್ಲಿ ಕಟ್ಟಿಹಾಕಲು ರಣತಂತ್ರ ರೂಪಿಸುತ್ತಿದ್ದಾರೆ. ಇಂಡಿಯಾ ಕೂಟದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿತೀಶ್ ಕುಮಾರ್, ಇಂದು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಇದೇ ವೇಳೆ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಅಂಗವಾಗಿ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಕೂಡಾ ಸಲ್ಲಿಸಲಿದ್ದಾರೆ. ವಾಜಪೇಯಿ ಸಂಪುಟದಲ್ಲಿ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನವದೆಹಲಿಗೆ ಭೇಟಿ ನೀಡುವ ಬಿಹಾರ ಸಿಎಂ ನಿತೀಶ್ ಕುಮಾರ್ ಕೇವಲ ಅರವಿಂದ್ ಕೇಜ್ರಿವಾಲ್ ಅವರನ್ನು ಮಾತ್ರವೇ ಭೇಟಿ ಆಗುವುದಿಲ್ಲ. ಇಂಡಿಯಾ ಮೈತ್ರಿಕೂಟದ ಪ್ರಮುಖ ನೇತಾರರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ಮಾಡುವ ಸಾಧ್ಯತೆಗಳಿವೆ.
ಇಂಡಿಯಾ ಮೈತ್ರಿಕೂಟದ ಮೊದಲ ಸಭೆ ಪಾಟ್ನಾದಲ್ಲಿ ನಡೆದಿತ್ತು. ಈ ವೇಳೆ, ಮೋದಿ ಎದುರಿಸಲು ಸಮಾನ ಮನಸ್ಕ ಪಕ್ಷಗಳು ಸೇರಿ ಮೈತ್ರಿಕೂಟ ರಚನೆ ಮಾಡುವ ಪ್ರಸ್ತಾವ ಮಂಡಿಸಲಾಗಿತ್ತು. ಮೈತ್ರಿಕೂಟ ರಚನೆಯ ರೂಪುರೇಷೆಗಳನ್ನು ತಯಾರಿಸಲಾಗಿತ್ತು. ಅದಾದ ಬಳಿಕ ಮೈತ್ರಿಕೂಟದ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಮೈತ್ರಿಕೂಟಕ್ಕೆ INDIA ಎಂದು ನಾಮಕರಣ ಮಾಡಲಾಗಿತ್ತು.
ಅದಾದ ಬಳಿಕ ಮುಂದಿನ ಸಭೆಯಲ್ಲಿ ಮುಂಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೂರನೇ ಸಭೆ ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಸಭೆಯಲ್ಲಿ ಮೈತ್ರಿಕೂಟದ ಹೋರಾಟದ ರಣತಂತ್ರ ರಚನೆ ಆಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲ ಇಂಡಿಯಾ ಕೂಟದ ನೇತೃತ್ವ, ಚುನಾವಣಾ ಕಾರ್ಯತಂತ್ರ ಸೇರಿದಂತೆ ಹೋರಾಟದ ಸಂಪೂರ್ಣ ಚಿತ್ರಣಕ್ಕೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರ ದೆಹಲಿ ಭೇಟಿ ಭಾರಿ ಕುತೂಹಲ ಕೆರಳಿಸಿದೆ. ಇಂದಿನ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಕಾಂಗ್ರೆಸ್ ನಾಯಕರ ಜತೆ ಮಹತ್ವ ಸಮಾಲೋಚನೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:'ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ': ದೇಶವಾಸಿಗಳಿಗೆ ಶುಭಾಶಯ ಕೋರಿದ ರಾಹುಲ್, ಖರ್ಗೆ