ನವದೆಹಲಿ: ಎನ್ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಒಕ್ಕೂಟ ತೊರೆದು ವಿಪಕ್ಷಗಳ ಇಂಡಿಯಾ ಕೂಟ ಸೇರಿ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಜೆಡಿಯು (ಸಂಯುಕ್ತ ಜನತಾದಳ) ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತೆ ಎನ್ಡಿಎಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇದನ್ನು ನಿತೀಶ್ಕುಮಾರ್ ಮತ್ತು ಬಿಜೆಪಿ ಅಲ್ಲಗಳೆದಿದ್ದಾರೆ.
ಈ ಮೊದಲು ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದ ನಿತೀಶ್ಕುಮಾರ್, ಬಿಹಾರದಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ಕೂಡ ರಚನೆ ಮಾಡಿದ್ದರು. ಇದಾದ ಬಳಿಕ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಸರ್ಕಾರದಿಂದ ಹೊರಬಂದಿದ್ದರು. ಅಲ್ಲದೇ, ಎನ್ಡಿಎಯಿಂದಲೂ ಹೊರಬಿದ್ದು, ವಿಪಕ್ಷಗಳನ್ನು ಒಗ್ಗೂಡಿಸಿ ಇಂಡಿಯಾ ಕೂಟವನ್ನು ರಚಿಸಿಕೊಂಡಿದ್ದರು.
ಇಂಡಿಯಾ ಬಲವರ್ಧನೆ ನನ್ನ ಗುರಿ: ಇದೀಗ ಮಾಧ್ಯಮಗಳಲ್ಲಿ ಜೆಡಿಯು ಮತ್ತೆ ಎನ್ಡಿಎ ಸೇರಲು ಬಯಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ವಿಪಕ್ಷಗಳ ಕೂಟದಲ್ಲಿ ಬಿರುಕು ಉಂಟಾಗಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಇದನ್ನು ನಿರಾಕರಿಸಿರುವ ಸಿಎಂ ನಿತೀಶ್ ಕುಮಾರ್, ಒಂದು ವರ್ಷದ ಹಿಂದೆಯೇ ನಾವು ಎನ್ಡಿಎ ಜೊತೆ ಸಂಬಂಧ ಕಡಿದುಕೊಂಡಿದ್ದು, ಈಗ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದೇ ತಮ್ಮ ಗುರಿ ಎಂದರು.
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ 'ಕ್ಯಾ ಫಾಲ್ತು ಬಾತ್ ಹೈ' ಎಂದು ಉತ್ತರಿಸಿದರು. ಇದಲ್ಲದೇ, ತಾವು ಒಳ್ಳೆಯ ಪ್ರಧಾನಿಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ಮಾತನಾಡುವುದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ, ಇಂತಹ ಹೇಳಿಕೆಗಳನ್ನು ನೀಡಬೇಡಿ ಎಂದು ನಾನು ಈಗಾಗಲೇ ನನ್ನ ಪಕ್ಷದ ಸಹೋದ್ಯೋಗಿಗಳಿಗೆ ಹೇಳಿದ್ದೇನೆ. ಇಂಡಿಯಾ ಮೈತ್ರಿಕೂಟದ ಏಕತೆಯನ್ನು ಬಲಪಡಿಸುವುದು ನನ್ನ ಏಕೈಕ ಆಶಯವಾಗಿದೆ. ನಾನು ಈ ದಿಕ್ಕಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಭಿಕ್ಷೆ ಬೇಡಿದರೂ ಸೇರಿಸಿಕೊಳ್ಳಲ್ಲ: ಜೆಡಿಯು ಮತ್ತೆ ಎನ್ಡಿಎ ಸೇರುವುದಾಗಿ ಅಂಗಲಾಚಿದರೂ ಬೇಡಿದರೂ ಅವರನ್ನು ಬಿಟ್ಟುಕೊಳ್ಳುವುದಿಲ್ಲ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ, ಜೆಡಿಯು ನಾಯಕರು ನಂಬಿಕೆ ಕಳೆದುಕೊಂಡಿದ್ದಾರೆ. ಹೊಣೆಗೇಡಿತನ ಪ್ರದರ್ಶಿಸಿದ ಬಳಿಕ ಮತ್ತೆ ಅವರನ್ನು ಮರಳಿ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ಖಡಕ್ ಆಗಿ ಹೇಳಿದರು.
ಜಿ20 ಸಭೆಯ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಬಿಹಾರ ಸಿಎಂ ನಿತೀಶ್ಕುಮಾರ್ ಸೇರಿದಂತೆ ಹಲವು ಇಂಡಿಯಾ ಕೂಟದ ನಾಯಕರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಲುಗೆಯಿಂದ ನಡೆದುಕೊಂಡಿದ್ದು, ಜೆಡಿಯು ಮತ್ತೆ ಎನ್ಡಿಎ ಸೇರಲಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: 'ನಾವು ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ಖಂಡಿತ': ರೈಲಿನಲ್ಲಿ ಪ್ರಯಾಣಿಸಿ ರಾಹುಲ್ ಗಾಂಧಿ ಘೋಷಣೆ