ಪಾಟ್ನಾ(ಬಿಹಾರ): ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಸರ್ಕಾರ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದರಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಈ ಸ್ಥಾನದಲ್ಲಿ ಕುಳಿತುಕೊಳ್ಳಲು ಬಹುಮತ ಮುಖ್ಯ. ನನ್ನನ್ನು ಈ ಆಸನದಲ್ಲಿ ಕೂರಿಸಿದ್ದಿರಿ. ಇದಕ್ಕಾಗಿ ಸಿಎಂ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಅಧ್ಯಕ್ಷೀಯ ಭಾಷಣದ ನಂತರ ಅವರು ರಾಜೀನಾಮೆ ಘೋಷಿಸಿದರು.
ವಿಜಯ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ: ಸ್ಪೀಕರ್ ವಿಜಯ್ ಸಿನ್ಹಾ ವಿರುದ್ಧ ನಿಯಮಾನುಸಾರ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಅಧಿವೇಶನ ಪ್ರಾರಂಭವಾಗುವ 14 ದಿನಗಳ ಮೊದಲು ಮತ್ತು ಸ್ಪೀಕರ್ ಅಥವಾ ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ ಅವರು ಸದನದ ಕಲಾಪಗಳನ್ನು ನಡೆಸುವಂತಿಲ್ಲ. ಉಪಸಭಾಪತಿ ಮಹೇಶ್ವರ್ ಹಜಾರಿ ಜೆಡಿಯುನವರಾಗಿದ್ದು, ಮಹಾಮೈತ್ರಿಕೂಟ ಸರ್ಕಾರ ರಚನೆಯಾದ ಬಳಿಕ ವಿಧಾನಸಭೆಯ ಸ್ಪೀಕರ್ ಹುದ್ದೆ ಆರ್ ಜೆಡಿ ಪಾಳಯಕ್ಕೆ ನಿಗದಿಯಾಗಿದೆ.
ನೂತನ ಸ್ವೀಕರ್ ಆಯ್ಕೆ: ಆರ್‌ಜೆಡಿ - ಜೆಡಿಯು ಸರ್ಕಾರಕ್ಕೆ 164 ಶಾಸಕರ ಬೆಂಬಲ ಇದೆ. ಸ್ವೀಕರ್ ಆಯ್ಕೆಗೆ 121 ಶಾಸಕರ ಬಹುಮತದ ಅಗತ್ಯವಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮಹಾಮೈತ್ರಿಕೂಟಕ್ಕೆ ಆರ್‌ಜೆಡಿ-79, ಜೆಡಿಯು-45, ಕಾಂಗ್ರೆಸ್-19, ಹಮ್-4 ಮತ್ತು ಸ್ವತಂತ್ರ 1. ಇದಲ್ಲದೇ ಎಂಎಲ್ 12, ಸಿಪಿಐ 2, ಸಿಪಿಎಂ 2 ಹೊರಗಿನಿಂದ ಬೆಂಬಲ ನೀಡಿದ್ದಾರೆ.
ಪ್ರತಿಪಕ್ಷವಾಗಿ ಬಿಜೆಪಿ: 76 ಶಾಸಕರನ್ನು ಹೊಂದಿರುವ ಬಿಜೆಪಿ ವಿರೋಧ ಪಕ್ಷವಾಗಿದೆ. ಎಐಎಂಐಎಂ ಶಾಸಕರೂ ವಿರೋಧ ಪಕ್ಷದಲ್ಲಿದ್ದಾರೆ. ಸದ್ಯ ವಿಧಾನಸಭೆಯಲ್ಲಿ ಎರಡು ಸ್ಥಾನಗಳು ಖಾಲಿಯಿದ್ದು, ಇತ್ತೀಚೆಗೆ ಬಿಜೆಪಿಯ ಮಾಜಿ ಸಚಿವ ಸುಭಾಷ್ ಸಿಂಗ್ ಅವರ ನಿಧನದಿಂದ ಒಂದು ಸ್ಥಾನ ತೆರವಾಗಿದೆ. ಇದೇ ವೇಳೆ ಆರ್‌ಜೆಡಿ ಶಾಸಕ ಅನಂತ್ ಸಿಂಗ್‌ಗೆ ನ್ಯಾಯಾಲಯ ನೀಡಿರುವ ಶಿಕ್ಷೆಯಿಂದಾಗಿ ಅವರ ಸ್ಥಾನ ತೆರವಾಗಿದೆ.
ಬಿಹಾರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಅವಧ್ ಬಿಹಾರಿ ಚೌಧರಿ ಹೆಸರನ್ನು ಆರ್‌ಜೆಡಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಬಿಹಾರ ವಿಧಾನ ಪರಿಷತ್ತಿನ ಹಂಗಾಮಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಅವಧೇಶ್ ನಾರಾಯಣ ಸಿಂಗ್ ಅವರನ್ನೂ ಬದಲಾಯಿಸಬಹುದು. ಈ ಹುದ್ದೆಗೆ ದೇವೇಶ್ ಚಂದ್ರ ಠಾಕೂರ್ ಹೆಸರನ್ನು ಜೆಡಿಯು ಸೂಚಿಸಿದೆ ಎಂಬ ಚರ್ಚೆ ನಡೆಯುತ್ತಿದೆ.
ಇನ್ನು ವಿರೋಧ ಪಕ್ಷದ ನಾಯಕ ಯಾರಾಗುತ್ತಾರೆ ಎಂಬ ವಿಷಯವೂ ಜೋರಾಗಿದೆ. ಆದರೆ ಬಿಜೆಪಿ ಇದುವರೆಗೂ ಪ್ರತಿಪಕ್ಷದ ನಾಯಕ ಯಾರು ಎಂಬುದನ್ನು ನಿರ್ಧರಿಸಿಲ್ಲ. ಸ್ವೀಕರ್ ಆಗಿದ್ದ ವಿಜಯ್ ಸಿನ್ಹಾ ಅವರಿಗೆ ಈ ಜವಾಬ್ದಾರಿಯನ್ನು ನೀಡಬಹುದು ಎಂದು ನಂಬಲಾಗಿದೆ.
ನಿತೀಶ್ ಕುಮಾರ್ ಅವರು ಬಿಜೆಪಿ ಮೈತ್ರಿ ತೊರೆದು, ಆರ್‌ಜೆಡಿ - ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅವರು ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.
ಆದರೆ ಈ ಹಿಂದಿನ ಸರ್ಕಾರದ ವೇಳೆ ಬಿಜೆಪಿಯ ಸಿನ್ಹಾ ಸ್ಪೀಕರ್ ಆಗಿದ್ದರು. ಹೀಗಾಗಿ ಅವರ ವಿರುದ್ಧ ಇಂದು ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.
ಇದನ್ನು ಓದಿ: ಸುನೀಲ್ ಕುಮಾರ್ ಸೇರಿ ಆರ್‌ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ.. ಮುಂದುವರಿದ ಕಾರ್ಯಾಚರಣೆ