ಬಿಲಾಸಪುರ್ (ಛತ್ತೀಸ್ಗಢ): ರಸ್ತೆ ಅಪಘಾತದಲ್ಲಿ ಗಾಯಗೊಂಡ ಹಾಗೂ ಅನಾರೋಗ್ಯದಿಂದ ಬಳಲುವ ಮೂಕಜೀವಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಛತ್ತೀಸ್ಗಢದ ನಿಧಿ ತಿವಾರಿ ಎಂಬ ಪ್ರಾಣಿ ಪ್ರೇಮಿ ಗಮನ ಸೆಳೆದಿದ್ದಾರೆ. ತಮ್ಮ ಮನೆಯಲ್ಲೇ ಅನೇಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಅವರನ್ನು ಉಪಚರಿಸುತ್ತಾರೆ ರೈತ ಕುಟುಂಬದ ಈ ನಿಧಿ..
ಬಿಲಾಸಪುರ್ನ ಕುಡಡಾಂಡ್ ಶಿವ ಚೌಕ್‌ನಲ್ಲಿ ನಿವಾಸಿಯಾದ ನಿಧಿ ತಿವಾರಿ, ಪ್ರಾಣಿಗಳಿಗಾಗಿಯೇ ಮನೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಅನಾರೋಗ್ಯ ಮತ್ತು ಗಾಯಗೊಂಡ ಪ್ರಾಣಿಗಳ ಬಗ್ಗೆ ಮಾಹಿತಿ ಸಿಕ್ಕರೆ ಸಾಕು ಅವುಗಳನ್ನು ಮನೆಗೆ ತಂದು ಆರೈಕೆ ಮಾಡುತ್ತಾರೆ.
ಸ್ವಂತ ವೆಚ್ಚದಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ: ನಿಧಿ ತಿವಾರಿ ಸಮೃದ್ಧ ರೈತ ಕುಟುಂಬದಿಂದ ಬಂದವರು. ಪ್ರಾಣಿಗಳ ಉಪಚರಿಸುವ ಇವರ ಕಾರ್ಯಕ್ಕೆ ಇಡೀ ಕುಟುಂಬಸ್ಥರು ಸಹ ಬೆಂಬಲವಾಗಿ ನಿಂತಿದ್ದಾರೆ. ಮೂಕಜೀವಿಗಳ ಆರೈಕೆಗಾಗಿ ಮನೆಯಲ್ಲಿ ಶೆಡ್ ನಿರ್ಮಿಸಿದ್ದಾರೆ.
ಈ ಶೆಡ್ನಲ್ಲಿ ಪ್ರತ್ಯೇಕವಾದ ಬೆಡ್, ಬೋನ್ ಸೇರಿದಂತೆ ಹಲವು ರೀತಿಯ ಸೌಕರ್ಯಗಳನ್ನು ಮಾಡಿದ್ದಾರೆ. ಜೊತೆಗೆ ಚಿಕಿತ್ಸಾ ಹಾಗೂ ಔಷಧಿ ಸಾಮಗ್ರಿಗಳನ್ನೂ ಮಾಡಿಕೊಂಡಿರುವ ನಿಧಿ ತಿವಾರಿ ಸ್ವತಃ ಅವರೇ ಉಪಚರಿಸುತ್ತಾರೆ. ಸ್ವಂತ ವೆಚ್ಚದಲ್ಲೇ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಕೃಷಿಯಿಂದ ಬಂದ ಹಣವನ್ನೇ ಮೂಕ ಪ್ರಾಣಿಗಳ ಆರೈಕೆಗೆ ಭರಿಸುತ್ತಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ತವರಿಗೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಜೇನು ಕುಟುಂಬ
ವಿವಿಧ ಪ್ರಾಣಿಗಳಿಗೆ ವಿವಿಧ ಬಗೆಯ ಆಹಾರ: ಪ್ರಾಣಿಗಳನ್ನು ಕೇವಲ ಆರೈಕೆ ಮಾಡಿದರೆ ಸಾಲದು ಎಂಬುವುದು ತಿಳಿದಿರುವ ನಿಧಿ ಆ ಪ್ರಾಣಿಗಳಿಗೆ ತಕ್ಕಂತೆ ಆಹಾರವನ್ನು ಒದಗಿಸುತ್ತಾರೆ. ನಾಯಿಗಳು, ಮೇಕೆಗಳು, ಕೋತಿಗಳು ಹಾಗೂ ಕತ್ತೆಗಳು ಎಲ್ಲ ಮೂಕ ಜೀವಿಗಳಿಗೆ ಅವುಗಳಿಗೆ ಬೇಕಾದ ಎಲೆಗಳು, ಹೊಟ್ಟು, ಹಣ್ಣುಗಳು ಹಾಗೂ ನಿರ್ದಿಷ್ಟವಾದ ಆಹಾರವನ್ನು ನೀಡುತ್ತಾರೆ.
ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು: ಕೆಲ ಪ್ರಾಣಿಗಳ ಸ್ಥಿತಿಯು ತುಂಬಾ ಕೆಟ್ಟದಾಗಿರುತ್ತದೆ. ಅವುಗಳನ್ನು ಸರಿಪಡಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತದೆ ಎನ್ನುವ ನಿಧಿ ತಿವಾರಿ, ಕೆಲವೊಮ್ಮೆ ಪ್ರಾಣಿಗಳ ಸೇವೆ ಮತ್ತು ಚಿಕಿತ್ಸೆಯಲ್ಲಿ ತಿಂಗಳಿಗೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ ಎಂದು ಹೇಳುತ್ತಾರೆ.
ಇನ್ಸ್ಟಾಗ್ರಾಮ್ನಲ್ಲಿ ಸಿಗುತ್ತದೆ ಕೊಂಚ ನೆರವು: ನಿಧಿ ತಿವಾರಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನರನ್ನು ಹೊಂದಿದ್ದಾರೆ. ಈ ಪ್ರಾಣಿಗಳ ಸೇವಾ ಕಾರ್ಯ ಅರಿತು ಕೆಲವೊಮ್ಮೆ ನೆರವಿನ ರೂಪದಲ್ಲಿ ಹಣ ಬರುತ್ತದೆ. ಇದು ಬಹಳಷ್ಟು ಸಹಾಯ ಮಾಡುತ್ತದೆ ಎಂದು ಅವರು ತಿಳಿಸುತ್ತಾರೆ.
ಇನ್ನು, ಯಾರೂ ಕೂಡ ಯಾವುದೇ ಪ್ರಾಣಿಗಳ ಹಿಂಸೆಯಲ್ಲಿ ತೊಡಬಾರದು. ಅವುಗಳನ್ನೂ ತಮ್ಮಂತೆ ಮನುಷ್ಯರು ಹಾಗೂ ನಮ್ಮ ಕುಟುಂಬದವರಂತೆ ತಿಳಿದುಕೊಂಡು ಜನರು ಅವುಗಳ ರಕ್ಷಣೆ ಮಾಡಬೇಕೆಂದು ಮನವಿ ಮಾಡುತ್ತಾರೆ ನಿಧಿ ತಿವಾರಿ.
ಇದನ್ನೂ ಓದಿ: 1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ