ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ನ (ಎಸ್‌ಎಫ್‌ಜೆ) ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಏರ್ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಜೀವ ಬೆದರಿಕೆ ಹಾಕಿದ ವೈರಲ್ ವಿಡಿಯೋ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಹೊಸ ಪ್ರಕರಣ ದಾಖಲಿಸಿಕೊಂಡಿದೆ. ವಿಡಿಯೋದಲ್ಲಿ ಆರೋಪಿ, ಏರ್ ಇಂಡಿಯಾದಲ್ಲಿ ಪ್ರಯಾಣಿಸುವ ಜನರಿಗೆ ಜಾಗತಿಕ ದಿಗ್ಬಂಧನ ಮತ್ತು ನವೆಂಬರ್ 19ರಿಂದ ವಿಮಾನಯಾನ ಕಾರ್ಯಾಚರಣೆಯನ್ನು ಬಂದ್ ಮಾಡುವ ಬೆದರಿಕೆ ಹಾಕಿದ್ದ. ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಎಸ್‌ಎಫ್‌ಜೆಯ ಸದಸ್ಯನಾದ ಪನ್ನುನ್, ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬೆದರಿಕೆಯ ವಿಡಿಯೋ ಪೋಸ್ಟ್ ಮಾಡಿದ್ದನು. ಏರ್ ಇಂಡಿಯಾ ವಿಮಾನಗಳಲ್ಲಿ ಸಿಖ್ಖರು ಪ್ರಯಾಣ ನಡೆಸದಂತೆಯೂ ಒತ್ತಾಯಿಸಿದ್ದನು. ಅಷ್ಟೇ ಅಲ್ಲ, ಏರ್ ಇಂಡಿಯಾವನ್ನು ವಿಶ್ವದಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆ ಚುರುಕುಗೊಳಿಸಿದೆ.
ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಉತ್ತೇಜಿಸುವುದು ಪನ್ನೂನ್ ಯೋಜನೆಯ ಭಾಗವಾಗಿದೆ. ಈತ ಪಂಜಾಬ್‌ನಲ್ಲಿ ಸಿಖ್ಖರ ನಡುವೆ ದ್ವೇಷ ಹರಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯವು ಜುಲೈ 10, 2019ರಂದು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಎಸ್‌ಎಫ್‌ಜೆ ಅನ್ನು 'ಕಾನೂನುಬಾಹಿರ ಸಂಘ' ಎಂದು ಘೋಷಿಸಿ ನಿಷೇಧಿಸಿದೆ. ಜುಲೈ 1, 2020ರಂದು, ಪನ್ನುನ್‌ನನ್ನು ಕೇಂದ್ರ ಸರ್ಕಾರವು 'ಭಯೋತ್ಪಾದಕ' ಎಂದು ಘೋಷಣೆ ಮಾಡಿದೆ. 2019ರಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಮೊದಲ ಪ್ರಕರಣ ದಾಖಲಿಸಿದ ಬಳಿಕ ಪನ್ನುನ್ ವಿರುದ್ಧ ಎನ್‌ಐಎ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಗುಂಡಿನ ದಾಳಿ: ಛತ್ ಪೂಜೆ ಮುಗಿಸಿ ಹಿಂದಿರುಗುತ್ತಿದ್ದ ಸಹೋದರರ ಮೇಲೆ ಫೈರಿಂಗ್.. ಇಬ್ಬರ ಸಾವು, ನಾಲ್ವರಿಗೆ ಗಾಯ