ಚೆನ್ನೈ (ತಮಿಳುನಾಡು) : ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಇಂದು ಮುಂಜಾನೆಯೇ ಕಾರ್ಯಾಚರಣೆ ಆರಂಭಿಸಿದ್ದು, ತಮಿಳುನಾಡಿನ ತಂಜಾವೂರ್ ಮತ್ತು ಉಸಿಲಂಪಟ್ಟಿ, ತಿರುಚ್ಚಿ ಹಾಗು ತಿರುನಲ್ವೇಲಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿವಿಧ ಜಿಲ್ಲೆಗಳ ಒಟ್ಟು 24 ಕಡೆಗಳಲ್ಲಿ ದಾಳಿ ನಡೆದಿದೆ.
ಒಂಬತ್ತು ಜಿಲ್ಲೆಗಳಲ್ಲಿ ಎನ್‌ಐಎ ಶೋಧ : ಹಿಂದೂ ಮುಖಂಡ ಮತ್ತು ಪಿಎಂಕೆ ಪುರಸಭೆ ಸದಸ್ಯರಾಗಿದ್ದ ತಿರುಪುವನಂ ರಾಮಲಿಂಗಂ ಎಂಬರನ್ನು 2019ರ ಫೆಬ್ರವರಿ 5ರಂದು ಹತ್ಯೆ ಮಾಡಲಾಗಿತ್ತು. ಮತಾಂತರ ತಡೆದ ಆರೋಪದ ಮೇಲೆ ಅವರನ್ನು ಹತ್ಯೆಗೈಯಲಾಗಿತ್ತು. ಈ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, 9 ಜಿಲ್ಲೆಗಳಲ್ಲಿ ಶೋಧಕಾರ್ಯ ಆರಂಭಿಸಿದ್ದಾರೆ.
ಹತ್ಯೆ ಪ್ರಕರಣ ಸಂಬಂಧ ಎನ್‌ಐಎ ತಿರುಚಿರಾಪಲ್ಲಿ ಮತ್ತು ತಿರುನಲ್ವೇಲಿಯಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ. ತಿರುನಲ್ವೇಲಿಯಲ್ಲಿ ಎಸ್ಡಿಪಿಐ ಅಧ್ಯಕ್ಷ ನೆಲ್ಲೈ ಮುಬಾರಕ್ನ ಮನೆಯನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ತಂಜಾವೂರ್ನಲ್ಲಿ ಎನ್‌ಐಎ ದಾಳಿ : ತಿರುಪುವನಂ ರಾಮಲಿಂಗಂ ಹತ್ಯೆ ಪ್ರಕರಣ ಸಂಬಂಧ ಸುಮಾರು 25ಕ್ಕೂ ಹೆಚ್ಚು ಎನ್‌ಐಎ ಅಧಿಕಾರಿಗಳ ತಂಡ ತಂಜಾವೂರ್ ಜಿಲ್ಲೆಯ ಕುಂಭಕೋಣಂ, ಮೆಲಕಾವೇರಿ, ತಿರುಪುವನಂ, ತಿರುಮಂಗಳಕುಡಿಯಲ್ಲಿ ಶೋಧ ನಡೆಸುತ್ತಿದ್ದಾರೆ.
ಕೊಯಮತ್ತೂರು ಜಿಲ್ಲೆಯಲ್ಲಿ ಕೊಟ್ಟೈಮೇಡು ಪ್ರದೇಶದ ಎಚ್‌ಎಂಪಿಆರ್ ರಸ್ತೆಯಲ್ಲಿರುವ ಪಿಎಫ್‌ಐ ಮುಖಂಡ ಅಪ್ಪಾಸ್ ಮನೆ ಮೇಲೆ ಎನ್‌ಐಎ ದಾಳಿ ನಡೆದಿದೆ. ತಿರುಚ್ಚಿ ಜಿಲ್ಲೆಯಲ್ಲಿ ಭೀಮನಗರ ಬಂಡರಿನಾಥಪುರಂನ ಹಾಜಿ ಮೊಹಮ್ಮದ್ ಹುಸೇನ್ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಅಫ್ಜಲ್ ಖಾನ್ ಮನೆಯಲ್ಲೂ ಶೋಧ ನಡೆಯುತ್ತಿದೆ. ಕಳೆದ ಐದು ತಿಂಗಳ ಹಿಂದಷ್ಟೇ ಅಫ್ಜಲ್ ಖಾನ್ ಈ ಮನೆಗೆ ಬಂದಿದ್ದ ಎಂದು ತಿಳಿದುಬಂದಿದೆ. ತಿರುಚ್ಚಿಯಲ್ಲಿ ಎನ್‌ಐಎ ಅಧಿಕಾರಿ ರಂಜಿತ್ ಸಿಂಗ್ ನೇತೃತ್ವದ ಮೂವರ ತಂಡವು ಅಫ್ಜಲ್ ಖಾನ್‌ನನ್ನು ವಿಚಾರಣೆ ನಡೆಸಿದೆ.
ತಂಜಾವೂರು ಜಿಲ್ಲೆಯ ನಟರಾಜಪುರಂನಲ್ಲಿರುವ ಬಕ್ರುದ್ದೀನ್ ಅವರ ಮನೆ ಹಾಗೂ ಪುದುಕ್ಕೊಟ್ಟೈ ಜಿಲ್ಲೆಯ ಉಸಿಲಂಕುಲಂನಲ್ಲಿರುವ ಪಿಎಫ್‌ಐ ಮಾಜಿ ಅಧ್ಯಕ್ಷ ರಶೀದ್ ಮೊಹಮ್ಮದ್ ಅವರ ನಿವಾಸ, ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಬಳಿಯ ಕಾಮರಾಜ್ ನಗರದ ಜಾಕೀರ್ ಹುಸೇನ್ ಮನೆ, ಮಧುರೈ ಜಿಲ್ಲೆಯ ಪೆರೈಯೂರ್ ಬಳಿಯ ಎಸ್.ಕೀಲಪಟ್ಟಿಯ ರಾಮನ್ ಅಲಿಯಾಸ್ ಅಬ್ದುಲ್ ರಜಾಕ್ ಅವರ ಮನೆ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಮಲಿಂಗಂ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ 12 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಐವರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ತಿರುಪುವನಂ ರಾಮಲಿಂಗಂ ಹತ್ಯೆ ಪ್ರಕರಣದ ವಿವರ: 2019ರ ಫೆಬ್ರವರಿ 5ರಂದು ಮತಾಂತರವನ್ನು ತಡೆದ ಆರೋಪದ ಮೇಲೆ ಹಿಂದೂ ನಾಯಕ ಮತ್ತು ಪಿಎಂಕೆ ನಾಯಕ ತಿರುಪುವನಂ ರಾಮಲಿಂಗಂ ಅವರನ್ನು ಕುಂಬಕೋಣಂನ ತಿರುಪುವನಂನಲ್ಲಿ ಹತ್ಯೆಗೈಯಲಾಗಿತ್ತು. ಪೊಲೀಸರು 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಲ್ಲಿ 11 ಮಂದಿಯನ್ನು ಬಂಧಿಸಿದ್ದು, 5 ಮಂದಿ ತಲೆಮರೆಸಿಕೊಂಡಿದ್ದಾರೆ.
ರಾಮಲಿಂಗಂ ಹತ್ಯೆ ಪ್ರಕರಣ ತಮಿಳುನಾಡಿನಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಕೊಲೆ ಖಂಡಿಸಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಆಕ್ರೋಶ ಹೊರಹಾಕಲಾಗಿತ್ತು. ಪೊಲೀಸ್ ತನಿಖೆ ನಡೆಯುತ್ತಿರುವಾಗಲೇ 2019ರ ಮಾರ್ಚ್ 14ರಂದು ರಾಮಲಿಂಗಂ ಹತ್ಯೆ ಪ್ರಕರಣವನ್ನು ಸರ್ಕಾರವು ಎನ್ಐಎಗೆ ವರ್ಗಾಯಿಸಿತ್ತು. ತನಿಖೆ ಕೈಗೆತ್ತಿಕೊಂಡ ಎನ್‌ಐಎ ಅಧಿಕಾರಿಗಳು 2019ರ ಜೂನ್ 27ರಂದು ತೆಂಕಾಶಿಯ ಅಹ್ಮದ್ ಸಾಲಿಕ್ ಎಂಬಾತನನ್ನು ಬಂಧಿಸಿದ್ದರು. 2019ರ ಜುಲೈ 3ರಂದು ತೆಂಕಾಶಿಯಲ್ಲಿರುವ ಅಹ್ಮದ್ ಸಾಲಿಕ್ ಮನೆಗೆ ದಾಳಿ ನಡೆಸಿದ್ದರು.
ಇದನ್ನೂ ಓದಿ : ನಿಷೇಧಿತ ಸಂಘಟನೆಗಳಿಗೆ ಮರುಜೀವ, ಭಯೋತ್ಪಾದನೆಗೆ ಸಂಚು ಆರೋಪ: 10 ಮಂದಿ ಅರೆಸ್ಟ್, ವಿವಿಧೆಡೆ ಎನ್‌ಐಎ ದಾಳಿ