ಚೆನ್ನೈ(ತಮಿಳುನಾಡು): ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಭಾನುವಾರ ತಮಿಳುನಾಡಿನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಐಸಿಸ್ ಸಿದ್ಧಾಂತ ಪ್ರತಿಪಾದಿಸುವ ಉಗ್ರಗಾಮಿ ಆರೋಪಿ ಮೊಹಮ್ಮದ್ ಇಕ್ಬಾಲ್ ಮತ್ತು ಹಿಜ್ಬ್-ಉಟ್-ತಹ್ರಿರ್(Hizb-Ut-Tahrir) ಸಂಘಟನೆ ಫೇಸ್ಬುಕ್ ಪೋಸ್ಟ್ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾಕದ ಗುಂಪು ಮತ್ತು ಉಗ್ರ ಸಂಘಟನೆ ಹಿಜ್ಬ್-ಉಟ್-ತಹ್ರಿರ್ ಸಿದ್ಧಾಂತ ಪ್ರತಿಪಾದಿಸುವ ಫೇಸ್ಬುಕ್ ಪೋಸ್ಟ್ಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಮಧುರೈನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಭಾರತ, ಬ್ರಿಟನ್ನಲ್ಲಿ ಪತ್ತೆಯಾಗಿರುವ ಕೋವಿಡ್ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿ
ಕಳೆದ ವರ್ಷ ಡಿಸೆಂಬರ್ನಲ್ಲಿ ಬಂಧಿಸಲ್ಪಟ್ಟ ಮಧುರೈ ನಿವಾಸಿ ಮೊಹಮ್ಮದ್ ಇಕ್ಬಾಲ್ ಕೆಲ ಪೋಸ್ಟ್ಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಉಗ್ರಗಾಮಿ ಇಕ್ಬಾಲ್, ಐಸಿಸಿ ಉಗ್ರರ ಸಿದ್ಧಾಂತ ಪ್ರತಿಪಾದಿಸಿ ದುಷ್ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದ್ದ ಎಂದು ಪ್ರಧಾನ ತನಿಖಾ ಸಂಸ್ಥೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಥೂಂಗಾ ವಿಗಿಂಲ್ ರೆಂಡು(Thoonga Vizhigal Rendu) ಎಂಬ ಹೆಸರಿನ ಫೇಸ್ಬುಕ್ನಲ್ಲಿ ಪೋಸ್ಟ್ ಹರಿದಾಡಿದ್ದು, ಇದರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಅಪಮಾನ ಮಾಡಲಾಗಿದೆ. ವಿವಿಧ ಧಾರ್ಮಿಕ ಗುಂಪುಗಳ ನಡುವೆ ಕೋಮು ಅಸಮಾನತೆ ಉಂಟು ಮಾಡುವಂತೆ ಪೋಸ್ಟ್ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಮಧುರೈನ ಕಾಜಿಮಾರ್ ಸ್ಟ್ರೀಟ್, ಕೆ.ಪುದೂರ್, ಪೆಥನಿಯಪುರಂ ಮತ್ತು ಮೆಹಬೂಬ್ ಪಲಯಂನಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಕಾರ್ಯಾಚರಣೆ ವೇಳೆ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್, ಮೆಮೊರಿ ಕಾರ್ಡ್, ಸಿಮ್, ಪೆನ್ ಡ್ರೈವ್ ಸೇರಿದಂತೆ ಅನೇಕ ಪುಸ್ತಕ, ಕರಪತ್ರ ಹಾಗೂ ದಾಖಲೆ ಸಹಿತ 16 ಡಿಜಿಟಲ್ ಸಾಧನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.