ಪುಣೆ (ಮಹಾರಾಷ್ಟ್ರ): ಮುಂಬರುವ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಪ್ರಮುಖ ಪ್ರತಿಪಕ್ಷಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಮೊದಲ ಸುತ್ತಿನ ಮಾತುಕತೆಯನ್ನು ಪಕ್ಷದ ನಾಯಕರು ನಡೆಸಿದ್ದಾರೆ. ಇದೀಗ ಮುಂದಿನ ಸಭೆಯನ್ನು ಜುಲೈ 13 ಮತ್ತು 14ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸೇರಲು ಪ್ರತಿಪಕ್ಷಗಳು ನಿರ್ಧರಿಸಿವೆ. ಈ ಕುರಿತು ಹಿರಿಯ ರಾಜಕಾರಣಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಅಧ್ಯಕ್ಷ ಶರದ್ ಪವಾರ್ ಮಾಹಿತಿ ನೀಡಿದ್ದಾರೆ.
ಇಂದು ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಚಡಪಡಿಸಲು ಶುರು ಮಾಡಿದ್ದಾರೆ. ನಮ್ಮ ಮುಂದಿನ ಸಭೆ ಜುಲೈ 13-14ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಪಾಟ್ನಾ ಸಭೆ ನಂತರ ಮುಂದಿನ ಸಭೆಯು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದರು.
ಇದನ್ನೂ ಓದಿ: ಪಾಟ್ನಾದಲ್ಲಿ ವಿಪಕ್ಷ ನಾಯಕರ ಮೆಗಾ ಸಭೆ: ಲೋಕಸಭೆ ಚುನಾವಣೆಗೆ ರೂಪುರೇಷೆ ಚರ್ಚೆ- ಯಾರೆಲ್ಲಾ ಭಾಗಿ?
ಜೂನ್ 23ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ 17 ಪ್ರತಿಪಕ್ಷಗಳ ಹಿರಿಯ ನಾಯಕರು ಸಭೆ ಸೇರಿದ್ದರು. 2024ರ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುವುದಾಗಿ ಪ್ರತಿಪಕ್ಷಗಳು ಪ್ರತಿಜ್ಞೆ ಮಾಡಿವೆ. ಈ ಸಂದರ್ಭದಲ್ಲಿ ಮಾತನಾಡಿದ್ದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಪಾಟ್ನಾದಲ್ಲಿ ಏನು ಪ್ರಾರಂಭವಾದರೂ ಅದು ಸಾರ್ವಜನಿಕ ಚಳುವಳಿಯಾಗುತ್ತದೆ. ಇಂದಿನ ಸಭೆಯಲ್ಲಿ ಪ್ರಮುಖ ಮೂರು ವಿಷಯಗಳನ್ನು ನಿರ್ಣಯಿಸಲಾಗಿದೆ. ನಾವು ಒಗ್ಗಟ್ಟಾಗಿದ್ದೇವೆ. ನಾವು ಒಟ್ಟಾಗಿ ಹೋರಾಡುತ್ತೇವೆ ಮತ್ತು ನಾವು ದೇಶಕ್ಕಾಗಿ ಹೋರಾಡುತ್ತೇವೆ ಎಂಬ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದರು.
ಪಾಟ್ನಾ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಅಧ್ಯಕ್ಷ ಉದ್ಧವ್ ಠಾಕ್ರೆ, ಜಾರ್ಖಂಡ್ ಮುಖ್ಯಮಂತ್ರಿ, ಜೆಎಂಎಂ ನಾಯಕ ಹೇಮಂತ್ ಸೊರೆನ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಸಿಪಿಐ ನಾಯಕ ಡಿ.ರಾಜಾ, ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡಲು ಪ್ರತಿಪಕ್ಷ ನಾಯಕರ ನಿರ್ಧಾರ, ಮುಂದಿನ ಸಭೆ ಶಿಮ್ಲಾದಲ್ಲಿ