ಹೈದರಾಬಾದ್: ಇಲ್ಲಿ 2 ದಿನ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ತನ್ನ ರಾಜಕೀಯ ನಿರ್ಣಯಗಳನ್ನು ಮಂಡಿಸಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿರ್ಣಯದ ಪ್ರಮುಖ ಅಂಶ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಬಿಜೆಪಿ ಹೊಸ ವಿಚಾರಗಳಿಗೆ ನಾಂದಿ ಹಾಡಿದೆ. ವಂಶಾಡಳಿತವನ್ನು ಕೊನೆಗಾಣಿಸುವುದೇ ನಮ್ಮ ಗುರಿ. ಕುಟುಂಬ ರಾಜಕಾರಣದಿಂದ ದೇಶ ಅಧಃಪತನದಲ್ಲಿತ್ತು. ಅದನ್ನು ಮುಕ್ತಗೊಳಿಸಿ ಅಭಿವೃದ್ಧಿ ಮಾಡುವುದೇ ಪಕ್ಷದ ಗುರಿಯಾಗಿದೆ ಎಂದರು.
ಪಕ್ಷ ಇದುವರೆಗೂ ಅಧಿಕಾರ ಹಿಡಿಯದ ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡುವುದು ಪ್ರಮುಖ ನಿರ್ಣಯವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕೇರಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವುದು ಪ್ರಮುಖ ಉದ್ದೇಶ. ಇನ್ನೂ 30 ರಿಂದ 40 ದೇಶದಲ್ಲಿ ಬಿಜೆಪಿ ಯುಗವಿರಲಿದೆ ಎಂದು ಅಮಿತ್ ಶಾ ಹೇಳಿದರು.
ಕರ್ನಾಟಕ ಹೊರತುಪಡಿಸಿ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಈವರೆಗೂ ಅಧಿಕಾರಕ್ಕೆ ಬಂದಿಲ್ಲ. ನಾವು ಅದನ್ನು ಮೀರಬೇಕಿದೆ. ಇದಕ್ಕಾಗಿ ಕಾರ್ಯಕರ್ತರು ಇನ್ನಷ್ಟು ಶ್ರಮಿಸಬೇಕು ಎಂದು ಅವರು ಕರೆ ಕೊಟ್ಟರು.
ಕಾಂಗ್ರೆಸ್ ವಿರುದ್ಧ ಟೀಕೆ: ಕಾಂಗ್ರೆಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ, ಆ ಪಕ್ಷದ ಅಧ್ಯಕ್ಷರ ಆಯ್ಕೆಯೇ ಪ್ರಜಾಪ್ರಭುತ್ವದ ಮಾದರಿಯಲ್ಲಿಲ್ಲ. ಒಂದು ಕುಟುಂಬಕ್ಕೆ ಪಕ್ಷವನ್ನು ಒತ್ತೆ ಇಡಲಾಗಿದೆ. ಮುಕ್ತ ಚುನಾವಣೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿದಲ್ಲಿ ತಮ್ಮ ಕುಟುಂಬದಿಂದ ಪಕ್ಷದ ಚುಕ್ಕಾಣಿ ಕೈ ಜಾರಲಿದೆ ಎಂಬ ಭೀತಿ ಗಾಂಧಿ ಕುಟುಂಬದಲ್ಲಿದೆ. ಇಂತಹ ಪಕ್ಷ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತದೆ ಎಂದು ಟೀಕಿಸಿದರು.
ಇದನ್ನೂ ಓದಿ: ಏಕನಾಥ್ ಶಿಂದೆಗೆ ಇಂದು 'ಬಹುಮತ' ಪರೀಕ್ಷೆ; ಬಿಜೆಪಿ-ಶಿವಸೇನೆ ಮೈತ್ರಿಗೆ ಸುಲಭ ಗೆಲುವಿನ ಗುರಿ