ಚೆನ್ನೈ: ಮಪ್ಪೆಡು ಬಳಿಯ ಪೆರುಂಬಕ್ಕಂ-ಅರಕ್ಕೋಣಂ ರಸ್ತೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವವಿವಾಹಿತ ದಂಪತಿ ಸಾವನ್ನಪ್ಪಿದ್ದಾರೆ.
ಅರಕ್ಕೋಣಂನ ಎಂ.ಮನೋಜ್ ಕುಮಾರ್ (31), ಚೆನ್ನೈನ ಪೆರುಂಬಕ್ಕಂನ ಕಾರ್ತಿಕಾ (30) ಅವರು ಅಕ್ಟೋಬರ್ 28ರಂದು ವಿವಾಹವಾಗಿದ್ದರು. ಸಪ್ತಪದಿ ತುಳಿದು ಮೂರನೇ ದಿನಕ್ಕೆ ಆ ದಂಪತಿ ಕಾರು ಅಪಘಾತದಲ್ಲಿ ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿ ಮಸಣ ಸೇರಿದ್ದಾರೆ.
ಹೌದು, ಮನೋಜ್ ಕುಮಾರ್ ದಂಪತಿ ಚೆನ್ನೈನಿಂದ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ಟ್ರಕ್ ನವದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಕಾರಿನ ಸಮೇತ ದಂಪತಿ ಸಂಪೂರ್ಣ ನಜ್ಜು-ಗುಜ್ಜಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಪ್ಪೇಡು ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರತೆಗೆಯಲು ಕೆಲ ಗಂಟೆಗಳ ಕಾಲ ಹರಸಾಹಸ ಪಟ್ಟರು. ಈ ವೇಳೆ ಟ್ರಾಫಿಕ್ ಕೂಡ ಅಸ್ತವ್ಯಸ್ತವಾಗಿ, ಒಂದು ಕಿ.ಮೀ.ಗೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.