ಅಹಮದಾಬಾದ್, ಗುಜರಾತ್: ದೀಪಾವಳಿಯ ಸಂಭ್ರಮದ ಮಧ್ಯೆಯೇ ದೇಶದಲ್ಲಿ ಕೊರೊನಾತಂಕ ಶುರುವಾಗಿದೆ. ಕೊರೊನಾ ರೂಪಾಂತರ ಮುಂದುವರಿದಿದ್ದು, ಮೊದಲ ಬಾರಿಗೆ ಬಿಎಫ್ 7 ಎಂಬ ಹೊಸ ತಳಿ ಕಂಡು ಬಂದಿದೆ. ಇದು ಗುಜರಾತ್ನ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಈ ಹೊಸ ತಳಿಯ ಕೊರೊನಾ ದೇಶದಲ್ಲಿಯೇ ಮೊದಲ ಪ್ರಕರಣವಾಗಿದೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಾಣುತ್ತಿರುವ ಮಧ್ಯೆಯೇ ಈ ಆತಂಕದ ವಿಚಾರ ಬಯಲಾಗಿದೆ. ಗುಜರಾತ್ನ ಅಹಮದಾಬಾದ್ ನಿವಾಸಿಯೊಬ್ಬರಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದೆ. 60 ವರ್ಷದ ವೃದ್ಧನ ಮಾದರಿ ಪರೀಕ್ಷೆಯಲ್ಲಿ ಹೊಸ ತಳಿ ಕಂಡು ಬಂದಿದೆ. ಈತನ ಸಂಪರ್ಕಕ್ಕೆ ಬಂದ 10 ಜನರ ಮೇಲೆ ನಿಗಾ ವಹಿಸಲಾಗಿದೆ.
ರೋಗಿಯ ಮಾದರಿಗಳನ್ನು ಪರೀಕ್ಷೆಗಾಗಿ ಗಾಂಧಿನಗರದ ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿದೆ. ರೂಪಾಂತರವಾದ ವೈರಸ್ಗೆ BF.7 ಎಂದು ಹೆಸರಿಸಲಾಗಿದೆ.
ಹೊಸ ತಳಿ ಅಪಾಯಕಾರಿಯೇ?: ಕೊರೊನಾ ವೈರಸ್ನ ಒಮಿಕ್ರಾನ್ ರೂಪಾಂತರಿಯ ಹೊಸ ತಳಿಯಾದ ಬಿಎಫ್ 7 ಎಷ್ಟರಮಟ್ಟಿಗೆ ಅಪಾಯಕಾರಿ ಎಂಬುದರ ಬಗ್ಗೆ ಪರೀಕ್ಷೆ ನಡೆಯಬೇಕಿದೆ. ಈ ಹೊಸ ತಳಿಯ ಹರಡುವಿಕೆಯ ಬಗ್ಗೆ ಸಾಂಕ್ರಾಮಿಕ ರೋಗ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕು ಆರಂಭಿಕ ಹಂತದಲ್ಲಿದೆ. ಲಸಿಕೆಯ ಪ್ರತಿರಕ್ಷಣೆ ಮೀರಿ ಇದು ಹರಡುವ ಮತ್ತು ಅಪಾಯ ಉಂಟು ಮಾಡುವ ಸಾಧ್ಯತೆಯನ್ನು ವೈದ್ಯಲೋಕ ಅಲ್ಲಗಳೆದಿಲ್ಲ.
ಓದಿ: ಮುಂಬೈ ಹೈದರಾಬಾದ್ ನಡುವೆ ಬುಲೆಟ್ ರೈಲು.. 14 ಗಂಟೆ ಅಲ್ಲ 3 ತಾಸಲ್ಲಿ ಪ್ರಯಾಣ