ಭುವನೇಶ್ವರ(ಒಡಿಶಾ): ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದಾಗಿ ತುರ್ತು ಭೂ ಸ್ಪರ್ಶ ಮಾಡಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ 40 ನಿಮಿಷಗಳ ನಂತರ ಒಡಿಶಾದ ಭುವನೇಶ್ವರ ವಿಮಾನದಲ್ಲಿ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬಿಪಿಐಎ ನಿರ್ದೇಶಕ ಪ್ರಸನ್ನ ಪ್ರಧಾನ್, ದೆಹಲಿಯಿಂದ ಹೊರಟಿದ್ದ ಇಂಡಿಗೋ ವಿಮಾನವನ್ನು ಇಂದು ಬೆಳಗ್ಗೆ 8.20ಕ್ಕೆ ತುರ್ತು ಭೂ ಸ್ಪರ್ಶ ಮಾಡಿಸಲಾಗಿದೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ತುರ್ತುಪರಿಸ್ಥಿತಿ ಘೋಷಿಸಲಾಯಿತು. ತಕ್ಷಣ ವಿಮಾನ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಹಕ್ಕಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ನಾಗರೀಕ ವಿಮಾನಯಾನ ಮಹಾನಿರ್ದೇಶನಾಲಯದಿಂದ ಅನುಮತಿ ಪಡೆದ ನಂತರ ವಿಮಾನ ಮತ್ತೆ ಹಾರಾಟ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ಘಟನೆಗಳು..ನಾಗ್ಪುರದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ : ಮುಂಬೈನಿಂದ ಹೊರಟಿದ್ದ ಇಂಡಿಗೋ ವಿಮಾನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ್ದ ಘಟನೆ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರ ಆರೋಗ್ಯ ಹಠಾತ್ ಹದಗೆಟ್ಟ ಹಿನ್ನೆಲೆ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.
ಮುಂಬೈನಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ವಿಮಾನದಲ್ಲಿ ರಕ್ತ ವಾಂತಿ ಮಾಡಲು ಪ್ರಾರಂಭಿಸಿದ್ದರು. ಈ ಸಂಬಂಧ ಇಂಡಿಗೋ ವಿಮಾನವನ್ನು ನಾಗ್ಪುರದಲ್ಲಿ ಲ್ಯಾಂಡಿಂಗ್ ಮಾಡಲಾಗಿತ್ತು. ಬಳಿಕ ಪ್ರಯಾಣಿಕನನ್ನು ಆಸ್ಪತ್ರೆಗೆ ರವಾನಿಸಿದ್ದು, ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರಯಾಣಿಕ ಸಾವನ್ನಪ್ಪಿದ್ದರು. 6E 5093 ಸಂಖ್ಯೆ ವಿಮಾನವು ಮುಂಬೈನಿಂದ ರಾಂಚಿಗೆ ಪ್ರಯಾಣಿಸುತ್ತಿತ್ತು.
ಜೈಪುರದಲ್ಲಿ ತುರ್ತು ಲ್ಯಾಂಡಿಂಗ್ : ಲಖನೌದಿಂದ ಶಾರ್ಜಾಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇತ್ತೀಚೆಗೆ ನಡೆದಿತ್ತು. ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ವಿಮಾನಯಾನ ಸಿಬ್ಬಂದಿಗೆ ಗಮನಕ್ಕೆ ತರಲಾಗಿ, ಪೈಲಟ್ ಯು-ಟರ್ನ್ ತೆಗೆದುಕೊಂಡು ತುರ್ತು ಲ್ಯಾಂಡಿಂಗ್‌ಗೆ ಜೈಪುರ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಯಿಂದ ಅನುಮತಿ ಪಡೆದಿದ್ದಾರೆ. ಎಟಿಸಿಯಿಂದ ಅನುಮತಿ ದೊರೆತ ನಂತರ ವಿಮಾನವನ್ನು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿತ್ತು. ಬಳಿಕ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ವಿಮಾನವು ಶಾರ್ಜಾಗೆ ಪ್ರಯಾಣ ಬೆಳೆಸಿತ್ತು.
ಇದನ್ನೂ ಓದಿ : ತಾಂತ್ರಿಕ ದೋಷ: ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಐಜಿಐಗೆ ವಾಪಸ್