ನವದೆಹಲಿ : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 12 ನೇ ತರಗತಿಯ ಇತಿಹಾಸ ಪುಸ್ತಕ ಸೇರಿದಂತೆ ತನ್ನ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿದೆ. 12 ನೇ ತರಗತಿಯ ಇತಿಹಾಸ ಪುಸ್ತಕದಲ್ಲಿನ ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳನ್ನು ತೆಗೆದು ಹಾಕಲಾಗಿದೆ. ದೇಶಾದ್ಯಂತ ಎನ್‌ಸಿಇಆರ್‌ಟಿ ಅನುಸರಿಸುವ ಎಲ್ಲ ಶಾಲೆಗಳಿಗೆ ಈ ಬದಲಾವಣೆ ಅನ್ವಯಿಸುತ್ತದೆ.
12 ನೇ ತರಗತಿಯ 'ಥೀಮ್ಸ್ ಆಫ್ ಇಂಡಿಯನ್ ಹಿಸ್ಟರಿ-ಭಾಗ 2' ನಿಂದ ಕಿಂಗ್ಸ್ ಅಂಡ್ ಕ್ರಾನಿಕಲ್ಸ್: ದಿ ಮೊಘಲ್ ಕೋರ್ಟ್ಸ್ (C. 16 ಮತ್ತು 17 ನೇ ಶತಮಾನಗಳು) ಅಧ್ಯಾಯ ತೆಗೆದುಹಾಕಲಾಗಿದೆ. ಅದೇ ರೀತಿ, NCERT ಹಿಂದಿ ಪಠ್ಯಪುಸ್ತಕಗಳಿಂದಲೂ ಕೆಲವು ಕವನ ಮತ್ತು ಪ್ಯಾರಾಗಳನ್ನು ತೆಗೆದುಹಾಕಲಾಗಿದೆ. NCERT ಪ್ರಕಾರ, ಈಗ ಮಾಡಲಾದ ಎಲ್ಲ ಬದಲಾವಣೆಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ, ಅಂದರೆ 2023-2024 ರಿಂದ ಜಾರಿಗೆ ತರಲಾಗುತ್ತದೆ.
ಇತಿಹಾಸ ಮತ್ತು ಹಿಂದಿ ಪಠ್ಯಪುಸ್ತಕಗಳ ಜೊತೆಗೆ 12ನೇ ತರಗತಿಯ ಪೌರನೀತಿ ಪುಸ್ತಕವನ್ನೂ ಪರಿಷ್ಕರಿಸಲಾಗಿದೆ. 'ಅಮೆರಿಕನ್ ಹೆಜೆಮನಿ ಇನ್ ವರ್ಲ್ಡ್ ಪಾಲಿಟಿಕ್ಸ್' ಮತ್ತು 'ದಿ ಕೋಲ್ಡ್ ವಾರ್ ಎರಾ' ಎಂಬ ಶೀರ್ಷಿಕೆಯ ಎರಡು ಅಧ್ಯಾಯಗಳನ್ನು ಪುಸ್ತಕದಿಂದ ತೆಗೆದುಹಾಕಲಾಗಿದೆ. ಹಾಗೆಯೇ 12 ನೇ ತರಗತಿಯ 'ಇಂಡಿಯನ್ ಪಾಲಿಟಿಕ್ಸ್ ಆಫ್ಟರ್ ಇಂಡಿಪೆಂಡೆನ್ಸ್' ಪಠ್ಯಪುಸ್ತಕದಿಂದ 'ರೈಸ್ ಆಫ್ ಪಾಪ್ಯುಲರ್ ಮೂವ್ಮೆಂಟ್ಸ್' ಮತ್ತು 'ಎರಾ ಆಫ್ ಒನ್ ಪಾರ್ಟಿ ಡಾಮಿನನ್ಸ್' ಎಂಬ ಎರಡು ಅಧ್ಯಾಯಗಳನ್ನು ಸಹ ತೆಗೆದುಹಾಕಲಾಗಿದೆ.
10ನೇ ಮತ್ತು 11ನೇ ತರಗತಿಯ ಪಠ್ಯಪುಸ್ತಕಗಳಲ್ಲಿಯೂ ಬದಲಾವಣೆ ಮಾಡಲಾಗಿದ್ದು, ‘ಡೆಮಾಕ್ರಸಿ ಅಂಡ್ ಡೈವರ್ಸಿಟಿ’, ‘ಪಾಪ್ಯುಲರ್ ಸ್ಟ್ರಗಲ್ಸ್ ಆ್ಯಂಡ್ ಮೂವ್ಮೆಂಟ್ಸ್’ ಮತ್ತು ‘ಚಾಲೆಂಜಸ್ ಆಫ್ ಡೆಮಾಕ್ರಸಿ’ ಎಂಬ ಅಧ್ಯಾಯಗಳನ್ನು 10ನೇ ತರಗತಿಯ ‘ಡೆಮಾಕ್ರಟಿಕ್ ಪಾಲಿಟಿಕ್ಸ್-2’ ಪುಸ್ತಕದಿಂದ ತೆಗೆದುಹಾಕಲಾಗಿದೆ. 'ಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್ಸ್', 'ಕ್ಲಾಶ್ ಆಫ್ ಕಲ್ಚರ್ಸ್' ಮತ್ತು 'ಇಂಡಸ್ಟ್ರಿಯಲ್ ರೆವಲ್ಯೂಷನ್' ನಂತಹ ಅಧ್ಯಾಯಗಳನ್ನು 11 ನೇ ತರಗತಿಯ 'ಥೀಮ್ಸ್ ಇನ್ ವರ್ಲ್ಡ್ ಹಿಸ್ಟರಿ' ಪಠ್ಯಪುಸ್ತಕದಿಂದ ಕೈಬಿಡಲಾಗಿದೆ. ಈ ಬದಲಾವಣೆಗಳನ್ನು ಖಚಿತಪಡಿಸಿದ ಹಿರಿಯ ಅಧಿಕಾರಿಗಳು, ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಈ ವರ್ಷದಿಂದ ನವೀಕರಿಸಲಾಗಿದೆ ಮತ್ತು ವಿವಿಧ ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿನ ಇತ್ತೀಚಿನ ಬದಲಾವಣೆಗಳಿಗೆ ಅನುಗುಣವಾಗಿ 10, 11 ಮತ್ತು 12 ನೇ ತರಗತಿಗಳ ಪಠ್ಯಕ್ರಮವನ್ನು ಪರಿಷ್ಕರಿಸುವುದಾಗಿ ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್ತು (UPMSP) ದೃಢಪಡಿಸಿದೆ. ಪರಿಷ್ಕೃತ ಯುಪಿ ಬೋರ್ಡ್ ಪಠ್ಯಕ್ರಮ - 2023-24 ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲು ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು ಮಂಡಳಿಯ ಕಾರ್ಯದರ್ಶಿ ದಿವ್ಯಕಾಂತ್ ಶುಕ್ಲಾ ಘೋಷಿಸಿದ್ದಾರೆ. ಇದಲ್ಲದೆ ಹೊಸ ಪಠ್ಯಕ್ರಮವನ್ನು ಒಳಗೊಂಡಿರುವ ಪಠ್ಯಪುಸ್ತಕಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಹಿಂದೆ 2022-23ರ ಶೈಕ್ಷಣಿಕ ಅವಧಿಗೆ ಪಠ್ಯಕ್ರಮವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಎನ್‌ಸಿಇಆರ್‌ಟಿ 6 ರಿಂದ 12 ನೇ ತರಗತಿಗಳ ಪಠ್ಯಪುಸ್ತಕಗಳಿಂದ ಹಲವಾರು ವಿಷಯಗಳನ್ನು ಕೈಬಿಟ್ಟಿತ್ತು.
ಇದನ್ನೂ ಓದಿ : ಏಳು ಸಾಹಿತಿಗಳ ಪಠ್ಯ ಕೈಬಿಟ್ಟು ಹೊರಡಿಸಿದ್ದ ಸುತ್ತೋಲೆ ಹಿಂಪಡೆದ ಶಿಕ್ಷಣ ಇಲಾಖೆ