ಮುಂಬೈ : ಆರ್ಯನ್ ಖಾನ್ ಡ್ರಗ್ ಪ್ರಕರಣ ಸಂಬಂಧ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖಂಡ ನೀಡಿರುವ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರೇವ್ ಪಾರ್ಟಿ ದಾಳಿ, ಇದೊಂದು 'ಪೂರ್ವ ಯೋಜಿತ ಸಂಚು' ಎಂದು ಎನ್ಸಿಪಿ ರಾಷ್ಟ್ರೀಯ ವಕ್ತಾರ ಮತ್ತು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಹಡಗಿನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದಡಿ ಅಕ್ಟೋಬರ್ 2 ರಂದು ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 11 ಮಂದಿಯನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿತ್ತು. ಆರ್ಯನ್ ಖಾನ್ ಜಾಮೀನು ಅರ್ಜಿಯನ್ನೂ ಮುಂಬೈ ಕೋರ್ಟ್ ವಜಾಗೊಳಿಸಿದೆ. ಆರ್ಯನ್ ಸೇರಿ 7 ಮಂದಿಗೆ 14 ದಿನಗಳ ಕಾಲ ಎನ್‌ಸಿಬಿ ವಶಕ್ಕೆ ನೀಡಲಾಗಿದೆ.
ಇದನ್ನೂ ಓದಿ: ಆರ್ಯನ್ ಖಾನ್ಗೆ ಬೇಲ್ ನಿರಾಕರಣೆ: ಬಿಕ್ಕಿ ಬಿಕ್ಕಿ ಅತ್ತ ಅಮ್ಮ ಗೌರಿ ಖಾನ್
ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ನವಾಬ್ ಮಲಿಕ್, ಒಟ್ಟು 11 ಜನರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಹೇಳಿದೆ. ಆದರೆ, ಈ ಪೈಕಿ ವೃಷಭ್ ಸಚ್‌ದೇವ, ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್‌ವಾಲಾ ಈ ಮೂವರನ್ನು ಎನ್‌ಸಿಬಿ ಬಿಡುಗಡೆ ಮಾಡಿದೆ. ವೃ
ರಿಷಭ್ ಸಚ್‌ದೇವ ಬಿಜೆಪಿಯ ಯುವ ಮೋರ್ಚಾದ ಮೋಹಿತ್ ಕಾಂಬೋಜ್ ಅವರ ಬಾವ. ಹೀಗಾಗಿ, ಬಂಧಿಸಿದ ಎರಡೇ ಗಂಟೆಗಳಲ್ಲಿ ವೃಷಭ್ ಸಚ್‌ದೇವ ಹಾಗೂ ಆತನ ಮತ್ತಿಬ್ಬರು ಸ್ನೇಹಿತರನ್ನು ಬಿಡುಗಡೆ ಮಾಡಲಾಗಿತ್ತು. ವಿಚಾರಣೆಯ ಸಮಯದಲ್ಲಿ ಮಾತ್ರ ಆತನ ಹೆಸರು ನ್ಯಾಯಾಲಯದಲ್ಲಿ ಕೇಳಿಬಂತು ಅಷ್ಟೇ ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.
ಎನ್‌ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ಈ ವಿಚಾರವನ್ನು ಬಹಿರಂಗಪಡಿಸಬೇಕು. ಈ ಮೂವರನ್ನು ಏಕೆ ಬಿಡುಗಡೆ ಮಾಡಲಾಗಿದೆ ಎಂಬುದಕ್ಕೆ ಉತ್ತರ ನೀಡಬೇಕು. ದೆಹಲಿ ಮತ್ತು ಮಹಾರಾಷ್ಟ್ರದ ಬಿಜೆಪಿ ನಾಯಕರೊಂದಿಗೆ ಸಮೀರ್ ವಾಂಖೆಡೆ ಮಾತುಕತೆ ನಡೆಸಿದ್ದಾರೆ. ಅವರ ಫೋನ್ ಕರೆಗಳನ್ನ ಟ್ರ್ಯಾಪ್ ಮಾಡಿ ಪರಿಶೀಲಿಸಬೇಕು ಎಂದು ಮಲಿಕ್ ಆಗ್ರಹಿಸಿದ್ದಾರೆ.