ಮುಂಬೈ: ಹನುಮಾನ್ ಚಾಲೀಸಾ ವಿವಾದದಿಂದ ಜೈಲುಶಿಕ್ಷೆ ಅನುಭವಿಸಿ, ಇದೀಗ ಜಾಮೀನು ಮೇಲೆ ಬಿಡುಗಡೆಯಾಗಿರುವ ಅಮರಾವತಿ ಸಂಸದೆ ನವನೀತ್ ಕೌರ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗ ಪತ್ರ ಬರೆದಿದ್ದಾರೆ. ಈ ವೇಳೆ, ಮಹಾರಾಷ್ಟ್ರ ಪೊಲೀಸರ ಮೇಲೆ ಗಂಭೀರ ಆರೋಪಗಳನ್ನ ಮಾಡಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ರಾಣಾ ದಂಪತಿ ಘೋಷಣೆ ಮಾಡಿದ್ದರು. ರಾಜ್ಯದ್ರೋಹ ಆರೋಪದ ಮೇಲೆ ಏಪ್ರಿಲ್ 23ರಂದು ಅವರನ್ನ ಬಂಧನ ಮಾಡಲಾಗಿತ್ತು.ಇದಾದ ಬಳಿಕ ತಲಾ 50 ಸಾವಿರ ರೂ. ಬಾಂಡ್ ಹಾಗೂ ಸಾಕ್ಷ್ಯನಾಶ ಮಾಡಬಾರದು ಎಂಬ ಷರತ್ತು ವಿಧಿಸಿ ಎರಡು ದಿನಗಳ ಹಿಂದೆ ಅವರಿಗೆ ಜಾಮೀನು ನೀಡಲಾಗಿದೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿರುವ ನವನೀತ್ ಕೌರ್ ಮುಂಬೈ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದು, ಲೋಕಸಭೆ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಜೈಲಿನಲ್ಲಿದ್ದ ವೇಳೆ ನನಗೆ ರಾತ್ರಿ ವೇಳೆ ಕುಡಿಯಲು ನೀರು ನೀಡಿಲ್ಲ ಎಂದು ಸಂಸದೆ ರಾಣಾ ಆರೋಪ ಮಾಡಿದ್ದಾರೆ. ಏಪ್ರಿಲ್ 23 ರಂದು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲಿ ಕಳೆದಿದ್ದೇನೆ. ಈ ವೇಳೆ ಕುಡಿಯಲು ನೀರು ಕೇಳಿದೆ, ಆದರೆ, ರಾತ್ರಿಯಿಡೀ ನನಗೆ ನೀರು ನೀಡಿಲ್ಲ. ಜೊತೆಗೆ ಜನಾಂಗೀಯ ನಿಂದನೆ ಮಾಡಲಾಗಿದೆ. ನಾನು ಪರಿಶಿಷ್ಟ ಜಾತಿಯ ಮಹಿಳಾ ಸಂಸದೆ ಎಂಬ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾರೆಂಬ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: 'ರಾಂಗ್ ಸೈಡ್ ಡ್ರೈವ್' ಪ್ರಶ್ನಿಸಿದ್ದಕ್ಕಾಗಿ ಲೇಡಿ ಕಾನ್ಸ್ಟೇಬಲ್ಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ!
ಕಾಂಗ್ರೆಸ್, ಎನ್ಸಿಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡ ಬಳಿಕ ಶಿವಸೇನೆಯಲ್ಲಿ ಹಿಂದುತ್ವದ ಜ್ವಾಲೆ ಸಂಪೂರ್ಣವಾಗಿ ನಾಶವಾಗಿದೆ. ಇದೀಗ, ಅದನ್ನ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಿಎಂ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಿಸುವ ನಿರ್ಧಾರ ಕೈಗೊಂಡಿದ್ದೆವು. ಯಾವುದೇ ಧಾರ್ಮಿಕ ಉದ್ನಿಗ್ನತೆ ಸೃಷ್ಟಿಸುವ ಉದ್ದೇಶ ನಮಗಿರಲಿಲ್ಲ ಎಂದು ರಾಣಾ ಪತ್ರದಲ್ಲಿ ತಿಳಿಸಿದ್ದಾರೆ.
ರಾತ್ರಿ ವೇಳೆ ಬಾತ್ರೂಂ ಬಳಕೆಗೆ ಅವಕಾಶ ಕೇಳಿದ್ರೂ, ಪೊಲೀಸರು ನನ್ನ ಬೇಡಿಕೆಯತ್ತ ಗಮನ ಹರಿಸಲಿಲ್ಲ. ಅವಾಚ್ಯ ಶಬ್ದಗಳಿಂದ ನನಗೆ ನಿಂದನೆ ಮಾಡಲಾಯಿತು. ನಮ್ಮ ಶೌಚಾಲಯವನ್ನ ಕೆಳಜಾತಿಯವರ ಬಳಕೆಗೆ ಅನುಮತಿ ನೀಡಲ್ಲ ಎಂದು ಹೇಳಿಲಾಗಿದೆ ಎಂಬ ಆರೋಪ ಮಾಡಿದ್ದಾರೆ.