ಮುಂಬೈ(ಮಹಾರಾಷ್ಟ್ರ): ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನಾಸಿಕ್ ಪೊಲೀಸರು ಸಮನ್ಸ್ ನೀಡಿದ್ದು, ಸೆಪ್ಟೆಂಬರ್ 2ರಂದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಪಾಳಮೋಕ್ಷ ಮಾಡುವ ಹೇಳಿಕೆ ಸಂಬಂಧಿಸಿದಂತೆ ರಾಣೆ ಬಂಧನವಾಗಿತ್ತು. ನಂತರ ಅವರು ಜಾಮೀನು ಪಡೆದು ತಮ್ಮ ನಿವಾಸಕ್ಕೆ ತೆರಳಿದ ನಂತರ ನಾಸಿಕ್ ಪೊಲೀಸರು ಸಮನ್ಸ್ ನೀಡಿ ಸೆಪ್ಟೆಂಬರ್ 2ರಂದು ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಜಾಮೀನು ನೀಡುವಾಗ ರಾಣೆಗೆ ಹಲವಾರು ಷರತ್ತುಗಳನ್ನು ವಿಧಿಸಲಾಗಿತ್ತು. ಆಗಸ್ಟ್ 31 ಮತ್ತು ಸೆಪ್ಟೆಂಬರ್ 13ರಂದು ವಿಚಾರಣೆಗೆ ರತ್ನಗಿರಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಇದರ ಜೊತೆಗೆ ಭವಿಷ್ಯದಲ್ಲಿ ಈ ರೀತಿಯ ಅಪರಾಧ ಮಾಡದಂತೆ ಎಚ್ಚರಿಕೆ ನೀಡಿದ್ದು, 15 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಒದಗಿಸಲಾಗಿದೆ.
ಮತ್ತೊಂದೆಡೆ, ಸಿಎಂ ಉದ್ಧವ್ ಠಾಕ್ರೆ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಿದರು. ರಾಣೆ ಬಂಧನದ ನಂತರ ಆದ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು ಎಂಬ ಮಾಹಿತಿಯಿದೆ. ಕೆಲವು ಶಿವಸೇನಾ ನಾಯಕರೂ ಸಿಎಂ ಅವರನ್ನು ತಡರಾತ್ರಿ ಭೇಟಿಯಾಗಿದ್ದರು.
ಮೂಲಗಳ ಪ್ರಕಾರ, ರಾಣೆ ಬಂಧನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಕಾಸ್ ಅಗಡಿ ಒಕ್ಕೂಟದ ಪಕ್ಷಗಳಾದ ಎನ್ಸಿಪಿ, ಕಾಂಗ್ರೆಸ್, ಶಿವಸೇನೆಗೆ ಬೆಂಬಲ ನೀಡಿವೆ
'ರಾಣೆ ಬಂಧನ ನ್ಯಾಯಸಮ್ಮತ.. ಆದರೆ..'
ಮಹಾಡ್ನಲ್ಲಿರುವ ಕೋರ್ಟ್ ರಾಣೆಗೆ ಜಾಮೀನು ನೀಡಿದ್ದು, ಈ ವೇಳೆ ರಾಣೆ ಬಂಧನ ನ್ಯಾಯ ಸಮ್ಮತವಾಗಿದ್ದು, ಆದರೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಮಂಗಳವಾರ ತಡರಾತ್ರಿ ಜಾಮೀನು ನೀಡುವ ವೇಳೆ ಮಹಾಡ್ ಕೋರ್ಟ್ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಂಧಿಸಲು ಕಾರಣ ಮತ್ತು ಇತರ ಕಾರಣಗಳನ್ನು ಗಮನಿಸಿದಾಗ, ರಾಣೆಯನ್ನು ಬಂಧಿಸಿರುವುದು ಸೂಕ್ತವೆನಿಸಿದೆ ಎಂದು ಮ್ಯಾಜಿಸ್ಟ್ರೇಟ್ ಎಸ್.ಎಸ್.ಪಾಟೀಲ್ ಆದೇಶದಲ್ಲಿ ತಿಳಿಸಿದ್ದಾರೆ. ರಾಣೆ ವಿರುದ್ಧ ದಾಖಲಾಗಿರುವ ಕೆಲವೊಂದು ಸೆಕ್ಷನ್ಗಳು ಜಾಮೀನು ರಹಿತ ಸೆಕ್ಷನ್ಗಳಾಗಿವೆ.
ಇನ್ನೂ ಕೆಲವೊಂದು ಅಂಶಗಳನ್ನು ಪರಿಗಣಿಸಿ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಯಾವುದೇ ರೀತಿಯ ಅಡ್ಡಿಯಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಆರೋಪಿ ಮತ್ತೊಮ್ಮೆ ಈ ಅಪರಾಧ ಮಾಡಬಾರದೆಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಬಂದ 78 ಮಂದಿಯಲ್ಲಿ 16 ಮಂದಿಗೆ ಕೋವಿಡ್ ಪಾಸಿಟಿವ್