ಇಂಫಾಲ್(ಮಣಿಪುರ) : ಕುತೂಹಲ ಕೆರಳಿಸಿದ್ದ ಮಣಿಪುರ ಮುಖ್ಯಮಂತ್ರಿ ಆಯ್ಕೆ ವಿಚಾರಕ್ಕೆ ಮುಕ್ತಿ ದೊರಕಿದೆ. ಭಾನುವಾರ ಇಂಫಾಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಎನ್.ಬಿರೇನ್ ಸಿಂಗ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಬಿಜೆಪಿಯ ಕೇಂದ್ರ ವೀಕ್ಷಕರಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರು ಪಕ್ಷದ ಇತರ ಶಾಸಕರೊಂದಿಗೆ ಅವಿರೋಧವಾಗಿ ಆಯ್ಕೆಯಾದ ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಎಲ್ಲರೂ ಒಮ್ಮತದಿಂದ ತೆಗೆದುಕೊಂಡ ಉತ್ತಮ ನಿರ್ಧಾರವಾಗಿದೆ. ಮಣಿಪುರದಲ್ಲಿ ಉತ್ತಮ, ಸ್ಥಿರ ಮತ್ತು ಜವಾಬ್ದಾರಿಯುತ ಸರ್ಕಾರ ನಿರ್ಮಾಣವಾಗಲಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಣಿಪುರದತ್ತ ವಿಶೇಷ ಗಮನ ಹರಿಸುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಇದರ ಜೊತೆಗೆ ಮಣಿಪುರದಲ್ಲಿ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕಾಗಿ ಮಣಿಪುರದ ಜನತೆಗೆ ಧನ್ಯವಾದ ತಿಳಿಸುತ್ತೇನೆ. ಇಲ್ಲಿನ ಎಲ್ಲಾ ಜನರ ಅನುಕೂಲಕ್ಕಾಗಿ ಉತ್ತಮ ಸರ್ಕಾರವನ್ನು ನೀಡುತ್ತೇವೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಯುಪಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮೋದಿ ಅಧಿಕೃತ ನಿವಾಸದಲ್ಲಿ ಸಭೆ
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಕೂಡ ಮಣಿಪುರ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಎನ್ ಬಿರೇನ್ ಸಿಂಗ್ ಅವರನ್ನು ಟ್ವಿಟರ್ನಲ್ಲಿ ಅಭಿನಂದಿಸಿದ್ದು, ಮಣಿಪುರ ಶಾಸಕಾಂಗ ಪಕ್ಷದ ನಾಯಕರಾಗಿ ಮರು ಆಯ್ಕೆಯಾದ ಬಿರೇನ್ ಸಿಂಗ್ ಅವರಿಗೆ ಶುಭಾಶಯಗಳು ಎಂದಿದ್ದಾರೆ.