ಶ್ರೀಕಾಕುಳಂ(ಆಂಧ್ರಪ್ರದೇಶ): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸನಿ ಚಂಡಮಾರುತ ಈಗಾಗಲೇ ಆಂಧ್ರಪ್ರದೇಶಕ್ಕೆ ಲಗ್ಗೆ ಹಾಕಿದ್ದು, ತನ್ನ ಆರ್ಭಟ ಶುರು ಮಾಡಿದೆ. ಇದರ ಮಧ್ಯೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಚಿನ್ನದ ಬಣ್ಣ ಹೋಲಿಕೆಯ ರಥವೊಂದು ಸಮುದ್ರದಲ್ಲಿ ತೇಲಿ ಬಂದಿದೆ. ಆಂಧ್ರಪ್ರದೇಶದ ಸಂತಬೊಮ್ಮಲಿ ಮಂಡಲದ ಸುನ್ನಪಲ್ಲಿಯ ಕರಾವಳಿ ತೀರದಲ್ಲಿ ಈ ಘಟನೆ ನಡೆದಿದೆ.
ಅಸನಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಈ ಚಿನ್ನದ ಬಣ್ಣ ಹೋಲಿಕೆಯ ರಥ ತೇಲಿ ಬರುತ್ತಿರುವುದನ್ನ ನೋಡಿರುವ ಕೆಲವರು ಅದನ್ನ ಎಳೆದು ದಡಕ್ಕೆ ತಂದು ನಿಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶ್ರೀಕಾಕುಳಂ ಜಿಲ್ಲೆಯ ಸಬ್ ಇನ್ಸ್ಪೆಕ್ಟರ್, ಬೇರೆ ದೇಶದಿಂದ ತೇಲಿ ಬಂದಿರುವ ಸಾಧ್ಯತೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ಮತ್ತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ಮಲೇಶಿಯಾ, ಥಾಯ್ಲೆಂಡ್ ಅಥವಾ ಜಪಾನ್ನಿಂದ ತೇಲಿ ಬಂದಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ರಥವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅಸನಿ ಚಂಡಮಾರುತ ಅಬ್ಬರ ಜೋರಾಗಿರುವ ಕಾರಣ ಈಗಾಗಲೇ ಆಂಧ್ರಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿವೆ.