ಮಲಪ್ಪುರಂ : 5 ವರ್ಷದ ಮಗನಿಗೆ ಮುಖ್ಯ ರಸ್ತೆಯಲ್ಲಿ ಬೈಕ್ ನಿಯಂತ್ರಿಸಲು ಕೊಟ್ಟ ಹಿನ್ನೆಲೆ ತಂದೆಯ ಪರವಾನಿಗೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ರದ್ದುಪಡಿಸಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ತೆಲಕ್ಕಾಡ್ ಮೂಲದ ಅಬ್ದುಲ್ ಮಜೀದ್ ಎಂಬುವರು ತನ್ನ ಪುಟ್ಟ ಮಗನೊಂದಿಗೆ ಮನ್ನಾರ್ಕಡ್ನ ಪೆರಿಂಟಲ್ಮಣ್ಣ ಹೆದ್ದಾರಿಯಲ್ಲಿ ಮೋಟಾರ್ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಅಬ್ದುಲ್ ತನ್ನ 5 ವರ್ಷದ ಮಗನಿಗೆ ಬೈಕ್ ಹ್ಯಾಂಡಲ್ ಹಿಡಿದು ಅದನ್ನು ನಿಯಂತ್ರಿಸಲು ತರಬೇತಿ ನೀಡುತ್ತಾ, ಬೈಕ್ ರೈಡ್ ಮಾಡುತ್ತಿದ್ದ.
ಈ ಕುರಿತು ವ್ಯಕ್ತಿಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದು, ವಿಡಿಯೋ ಗಮನಿಸಿದ ಪೆರಿಂಟಲ್ಮಣ್ಣ ಮೋಟಾರ್ ವಾಹನ ಇನ್ಸ್‌ಪೆಕ್ಟರ್ ಬಿನೊಯ್ ವರ್ಗೀಸ್, ವಿಚಾರಣೆ ನಡೆಸಿ ಮಜೀದ್ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದರು.
ಇನ್ನು, ಅಬ್ದುಲ್ ಮಜೀದ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ಚಾಲನಾ ಪರವಾನಿಗೆಯನ್ನು ಒಂದು ವರ್ಷದ ಅವಧಿಗೆ ರದ್ದುಪಡಿಸಲಾಗಿದೆ ಎಂದು ಪೆರಿಂಟಲ್ಮಣ್ಣ ಜಂಟಿ ಆರ್‌ಟಿಒ ಮುಜೀಬ್ ಮಾಹಿತಿ ನೀಡಿದ್ದಾರೆ.