ನವದೆಹಲಿ: ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು 'ಮುಸ್ಲಿಮೀನ್' ಪದದ ಬಗ್ಗೆ ಮಂಗಳವಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಪಕ್ಷದ ಹೆಸರಿನಲ್ಲಿ ಕೇವಲ 'ಮುಸ್ಲಿಮೀನ್' ಪದವನ್ನು ಬಳಸುವುದರಿಂದ ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸುವುದಿಲ್ಲ ಅಥವಾ ಧರ್ಮದ ಹೆಸರಿನಲ್ಲಿ ಮತದಾರರನ್ನು ಆಕರ್ಷಿಸುವುದಿಲ್ಲ ಎಂದು ಎಐಎಂಐಎಂ ತಿಳಿಸಿದೆ.
ಇದನ್ನೂ ಓದಿ: ಮುಸ್ಲಿಂ ಮತ ಬ್ಯಾಂಕ್ ವಿಭಜನೆ ತಡೆಗೆ ಕಾರ್ಯತಂತ್ರ.. ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಮಹತ್ವದ ಸಭೆ
ರಾಜಕೀಯ ಪಕ್ಷಗಳ ಚಿಹ್ನೆ ಮತ್ತು ಹೆಸರಿನ ಕುರಿತು ತಕರಾರು ಎತ್ತಿ ಸೈಯದ್ ವಸೀಂ ರಿಜ್ವಿ ಎಂಬುವವರು ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸಲ್ಲಿಸಿದ್ದಾರೆ. ಯಾವುದೇ ಧರ್ಮದ ಹೆಸರನ್ನು ತಮ್ಮ ಪಕ್ಷದ ಹೆಸರಿನಲ್ಲಿ ಬಳಸುತ್ತಿರುವ ಅಥವಾ ತಮ್ಮ ಚಿಹ್ನೆಗಳಲ್ಲಿ ಧಾರ್ಮಿಕ ಅರ್ಥಗಳನ್ನು ಹೊಂದಿರುವ ರಾಜಕೀಯ ಪಕ್ಷಗಳಿಗೆ ನೀಡಲಾದ ಚಿಹ್ನೆ ಮತ್ತು ಹೆಸರನ್ನು ರದ್ದುಗೊಳಿಸುವಂತೆ ಕೋರಿ ಈ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಗೆ ಪ್ರತಿಕ್ರಿಯೆಯಾಗಿ ಎಐಎಂಐಎಂ ಪಕ್ಷವು ತನ್ನ ಅಫಿಡವಿಟ್ ಸಲ್ಲಿಸಿದೆ.
ಎಲ್ಲರಿಗೂ ಪಕ್ಷದ ಸದಸ್ಯತ್ವ ಮುಕ್ತ: ಎಐಎಂಐಎಂ ಪಕ್ಷವು ತನ್ನ ಸದಸ್ಯರು ಮತ್ತು ಕಾರ್ಯಕರ್ತರಿಗೆ ಮತ ಕೇಳಲು ಧರ್ಮದ ಹೆಸರನ್ನು ಬಳಸಲು ಎಂದಿಗೂ ಕೇಳಿಲ್ಲ. ಮೇಲಾಗಿ ಪಕ್ಷದ ಸದಸ್ಯತ್ವವು ಧರ್ಮ, ಜಾತಿ, ಪಂಥ ಇತ್ಯಾದಿಗಳನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಮುಂದೆ ಅಸಾದುದ್ದೀನ್ ಓವೈಸಿ ನೇತೃತ್ವದ ಪಕ್ಷವು ವಾದಿಸಿದೆ. ಅಲ್ಲದೇ, ಪಕ್ಷವು ಯಾವಾಗಲೂ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಸಾಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕು ಮತ್ತು ನೀತಿಗಳನ್ನು ರಕ್ಷಿಸುವ ಉದ್ದೇಶಯನ್ನು ಹೊಂದಿದೆ ಎಂದೂ ತಿಳಿಸಿದೆ.
1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಯಾವುದೇ ನಿಬಂಧನೆಗಳನ್ನೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು ಉಲ್ಲಂಘಿಸಿಲ್ಲ. ಜೊತೆಗೆ ಯಾವುದೇ ಭ್ರಷ್ಟ ಆಚರಣೆಯಲ್ಲೂ ನಮ್ಮ ಪಕ್ಷ ತೊಡಗಿಲ್ಲ ಎಂದು ಹೇಳಿಕೊಂಡಿದೆ. ಇದೇ ವೇಳೆ ರಾಜಕೀಯ ಪಕ್ಷದ ಚಿಹ್ನೆ ಮತ್ತು ಹೆಸರಿನ ಕುರಿತಾಗಿ ಪಿಐಎಲ್ ಸಲ್ಲಿಸಿರುವ ಅರ್ಜಿದಾರರ ವಿಶ್ವಾಸಾರ್ಹತೆಯ ಬಗ್ಗೆಯೂ ಎಐಎಂಐಎಂ ಪಕ್ಷವು ಅನುಮಾನ ವ್ಯಕ್ತಪಡಿಸಿದೆ.
ಎರಡು ಸಮುದಾಯಗಳ ನಡುವೆ ವಿಭಜನೆ ಸೃಷ್ಟಿಸುವ ಪ್ರಯತ್ನ: ಅರ್ಜಿದಾರರು ಉತ್ತರ ಪ್ರದೇಶದ ರಾಜ್ಯದ ಸಮಾಜವಾದಿ ಪಕ್ಷದ ಮಾಜಿ ಸದಸ್ಯರಾಗಿದ್ದಾರೆ. ಅಲ್ಲದೇ, 2008ರಲ್ಲಿ ಲಖನೌದ ಕಾಶ್ಮೀರಿ ಮೊಹಲ್ಲಾ ವಾರ್ಡ್‌ನಿಂದ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಸದ್ಯ ಆನ್‌ಲೈನ್‌ನಲ್ಲಿ ಲಭ್ಯವಿರುವ ವರದಿಗಳ ಪ್ರಕಾರ, ಅರ್ಜಿದಾರರು ಉತ್ತರ ಪ್ರದೇಶದ ಮತ್ತೊಂದು ರಾಜಕೀಯ ಪಕ್ಷಕ್ಕೆ ಹತ್ತಿರವಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ ಎಂದು ಓವೈಸಿ ಪಕ್ಷ ಹೇಳಿದೆ.
ಪ್ರಮುಖವಾಗಿ ಅರ್ಜಿಯಲ್ಲಿ ಬಳಸಲಾದ ಭಾಷೆ ಮತ್ತು ಅದರಲ್ಲಿ ಹೇಳಲಾದ ಪರಿಶೀಲಿಸದ ಸಂಗತಿಗಳು ಎರಡು ಸಮುದಾಯಗಳ ನಡುವೆ ಅಸ್ತಿತ್ವದಲ್ಲಿಲ್ಲದ ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನದಂತೆ ತೋರುತ್ತದೆ ಎಂದು ವಕೀಲ ಅಭಿಷೇಕ್ ಜೆಬ್ರಾಜ್ ಮೂಲಕ ಸಲ್ಲಿಸಿರುವ ಅಫಿಡವಿಟ್ನಲ್ಲಿ ಎಐಎಂಐಎಂ ಪಕ್ಷ ಉಲ್ಲೇಖಿಸಿದೆ.
ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ... ನಮ್ಮಿಂದಲೇ ಅತೀ ಹೆಚ್ಚು ಕಾಂಡೋಮ್ ಬಳಕೆ: ಓವೈಸಿ