ಪೋರಬಂದರ್(ಗುಜರಾತ್): ಇಲ್ಲಿನ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಲಾಗಿತ್ತು ಎನ್ನಲಾದ ಮಸೀದಿಯನ್ನು ಸರ್ಕಾರ ತೆರವು ಮಾಡಿದೆ. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಘಟನೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದು, 27 ಜನರನ್ನು ಬಂಧಿಸಲಾಗಿದೆ.
ಫೋರಬಂದರ್ನ ವಿವಿಧೆಡೆ ಅಕ್ರಮವಾಗಿ ಕಟ್ಟಲಾದ 8 ಮಸೀದಿಗಳಿಗೆ ಸ್ಥಳೀಯ ಆಡಳಿತ ತೆರವಿಗೆ ನೋಟಿಸ್ ನೀಡಿದೆ. ಉತ್ತರ ನೀಡದಿದ್ದಾಗ ಅಕ್ಟೋಬರ್ 3 ರಿಂದಲೇ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.
ಕಡಲತೀರದಲ್ಲಿ ಕಟ್ಟಲಾದ ಮಸೀದಿ ಕಟ್ಟಡಗಳ ತೆರವು ವಿರೋಧಿಸಿ ಮುಸ್ಲಿಮರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ತೆರವು ಮಾಡುತ್ತಿರುವ ಕಟ್ಟಡಗಳ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿ ತಡೆದಿದ್ದಾರೆ.
ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಲ್ಲಿ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 125 ಜನರ ಮೇಲೆ ಪ್ರಕರಣ ದಾಖಲಾಗಿದೆ. 27 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಸೀದಿ ಕಟ್ಟಡ ತೆರವಿನಿಂದ ಪೋರಬಂದರ್ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಅಕ್ರಮವಾಗಿ ನಿರ್ಮಿಸಲಾದ ಮಸೀದಿ ಕಟ್ಟಡವನ್ನು ತೆರವು ಮಾಡುವ ವೇಳೆ ಮುಸ್ಲಿಮರು ಗುಂಪು ಕಟ್ಟಿಕೊಂಡು ತಡೆಯಲು ಯತ್ನಿಸಿದರು. ಚಾದರ್ ಮೆರವಣಿಗೆ ನಡೆಸಿ ಪ್ರತಿರೋಧವೊಡ್ಡಿದರು. ನಿಯಮಪಾಲನೆಯ ತಿಳುವಳಿಕೆ ನೀಡಿದರೂ, ಲೆಕ್ಕಿಸದೇ ಮುನ್ನುಗ್ಗಿದಾಗ ಮೂರು ಬಾರಿ ಅಶ್ರುವಾಯು ಸಿಡಿಸಿ ಪ್ರತಿಭಟನೆ ತಡೆಯಬೇಕಾಯಿತು ಎಂದು ಪೊಲೀಸರು ತಿಳಿಸಿದರು.