ಹೈದರಾಬಾದ್: ಗುಜರಾತ್‌ನಲ್ಲಿ ಸತತ ಏಳನೇ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿ ಸನ್ನದ್ಧವಾಗಿದೆ. ವಿಶೇಷ ಎಂದರೆ ಗುಜರಾತ್‌ನಲ್ಲಿ ಶೇ 9 ರಷ್ಟು ಮುಸ್ಲಿಂ ಸಮುದಾಯದ ಜನಸಂಖ್ಯೆ ಇದೆ. ಇಷ್ಟು ಸಂಖ್ಯೆಯಲ್ಲಿ ಜನಸಂಖ್ಯೆಯನ್ನು ಹೊಂದಿದ್ದರೂ ಬಿಜೆಪಿ ಒಂದೇ ಒಂದು ಮುಸ್ಲಿಂ ಅಭ್ಯರ್ಥಿಯನ್ನು ಹಾಕಿಲ್ಲ.
ಬಿಜೆಪಿಯ ಈ ಕ್ರಮವೇ ಪಕ್ಷದ ಪರವಾಗಿ ಮುಸ್ಲಿಂ(ಎಂ) ಫ್ಯಾಕ್ಟರ್ ಅನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ಪಕ್ಷದ ನಿಷ್ಠಾವಂತ ಹಿಂದೂ ಮತ ಬ್ಯಾಂಕ್‌ಗೆ ಸ್ಪಷ್ಟ ಸಂದೇಶ ಕಳುಹಿಸುತ್ತದೆ ಎಂದು ಹೇಳಲಾಗುತ್ತಿದೆ. 1998ರಲ್ಲಿ ಬಿಜೆಪಿ ಕೊನೆಯ ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಗುಜರಾತ್‌ನಲ್ಲಿ ಕಣಕ್ಕಿಳಿಸಿತ್ತು.
ಆದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಆರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಡಿಸೆಂಬರ್ 1 ರಂದು ಎರಡು ಹಂತಗಳಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಮುಸ್ಲಿಂ ಅಭ್ಯರ್ಥಿಗಳೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ), ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್ - ಇ - ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) 11 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಒವೈಸಿ ಬಿಜೆಪಿಯ ಬಿ ಟೀಂ?: ಒವೈಸಿಯವರ AIMIM ಬಿಜೆಪಿಯ B-ಟೀಮ್ ಎಂದು ಕಾಂಗ್ರೆಸ್ ಮತ್ತು ಎಎಪಿ ಎರಡೂ ನಿರಂತರವಾಗಿ ಟೀಕಿಸುತ್ತಾ ಬಂದಿವೆ. ಹೈದರಾಬಾದ್ ಸಂಸದರ ಪಕ್ಷಕ್ಕೆ 'ಹಸಿರು ಕಮಲ' ಮತ್ತು 'ಗುಪ್ತ ಕಮಲ' ಎಂಬ ಅಡ್ಡ ನಾಮಗಳನ್ನು ಇಡಲಾಗಿದೆ. ಕಣದಲ್ಲಿರುವ ಅವರ ಅಭ್ಯರ್ಥಿಗಳೇ ಬಿಜೆಪಿಗೆ ಲಾಭಕರ ಎಂದು ಹೇಳಲಾಗುತ್ತಿದೆ.
182 ವಿಧಾನಸಭಾ ಕ್ಷೇತ್ರಗಳ ಪೈಕಿ ಮುಸ್ಲಿಮರು 72 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಮುಸ್ಲಿಂ ಮತದಾರರು 25 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಸುಮಾರು 15 ರಿಂದ 60 ಪ್ರತಿಶತದಷ್ಟು ಮತಗಳನ್ನು ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಫಲಿತಾಂಶಗಳ ಮೇಲೆ ಸ್ಪಷ್ಟವಾಗಿ ಪ್ರಭಾವ ಬೀರಬಹುದು. ಲಿಂಬಾಯತ್‌ನಿಂದ 36 ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಬಾಪುನಗರದಿಂದ 29 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಗುಜರಾತ್ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರು: ಗುಜರಾತಿನ ವಿಧಾನಸಭೆಯಲ್ಲಿ ಮುಸ್ಲಿಂ ಪ್ರಾತಿನಿಧ್ಯವು 1952 ರಿಂದ ಇಳಿಮುಖವಾಗಿದೆ. 1980 ರಲ್ಲಿ ಸದನದಲ್ಲಿ 6 ಮುಸ್ಲಿಂ ಶಾಸಕರಿದ್ದರು. ಇದುವೇ ಇದುವರೆಗಿನ ಅತ್ಯಧಿಕ ಮುಸ್ಲಿಂ ಶಾಸಕರ ಸಂಖ್ಯೆಯಾಗಿದೆ. 1962 ಮತ್ತು 2007ರಲ್ಲಿ ರಚನೆಯಾದ ಅಸೆಂಬ್ಲಿಗಳು ತಲಾ ಐವರು ಮುಸ್ಲಿಂ ಶಾಸಕರನ್ನು ಹೊಂದಿದ್ದವು. ಮುಸ್ಲಿಂ ಶಾಸಕರ ಬಲವು 2017 ರಲ್ಲಿ 2 ಕ್ಕೆ ಕುಸಿದಿದೆ. ಈ ಬಾರಿ ಒಟ್ಟು 236 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 20 ಮುಸ್ಲಿಂ ಮಹಿಳೆಯರು ಅಖಾಡದಲ್ಲಿದ್ದಾರೆ.
ಇದನ್ನು ಓದಿ: ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ: ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ