ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆದ ಅಗ್ನಿ ದುರಂತರದಲ್ಲಿ ಕ್ರೇನ್ ಚಾಲಕರೊಬ್ಬರು ಸುಮಾರು 50 ಜನರ ಪಾಲಿಗೆ ಆಪದ್ಬಾಂಧವರಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ತಡವಾಗಿ ಬಂದ ಆರೋಪದ ನಡುವೆ ಈ ಚಾಲಕ ಬಹುತೇಕ ಮಹಿಳೆಯರು ಸೇರಿದಂತೆ 50 ಜನರನ್ನು ರಕ್ಷಣೆ ಮಾಡಿದ್ದಾರೆ.
ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದು 27 ಜನರು ಸಜೀವ ದಹನವಾಗಿದ್ಧಾರೆ. ಅಂದು ಕಟ್ಟಡದಲ್ಲಿ ಬೆಂಕಿ ನೋಡಿದ ಕ್ರೇನ್ ಚಾಲಕ ದಯಾನಂದ ತಿವಾರಿ ತಮ್ಮ ಕ್ರೇನ್ ಸಹಾಯದಿಂದಲೇ ಜನರನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಅಂದಿನ ಘಟನೆ ಬಗ್ಗೆ ಮಾತನಾಡಿರುವ ಅವರು, ಬೆಂಕಿಯ ಕೆನ್ನಾಲಿಗೆ ಹೆಚ್ಚಾಗದಿದ್ದರೆ ಇನ್ನೂ ಕೆಲ ಜನರನ್ನು ಉಳಿಸಬಹುದಿತ್ತು ಎಂದು ಮರುಕ ಪಟ್ಟಿದ್ದಾರೆ.
ಕ್ರೇನ್ನ ಮಾಲೀಕ ಮತ್ತು ಹೆಲ್ಪರ್ ಸಮೇತವಾಗಿ ಬರುತ್ತಿದ್ದಾಗ ಕಟ್ಟಡಕ್ಕೆ ಬೆಂಕಿ ಬಿದ್ದಿರುವುದನ್ನು ಗಮನಿಸಿದೆ. ಇಡೀ ಅರ್ಧ ಕಟ್ಟಡ ಹೊತ್ತಿ ಉರಿಯುತ್ತಿತ್ತು. ಆಗ ಕ್ರೇನ್ನ ಮೂಲಕ ಜನರನ್ನು ರಕ್ಷಣೆ ಮಾಡಲಾಯಿತು. ನಮ್ಮ ಮಾಲೀಕರು ಸಹ ಸ್ಥಳದಲ್ಲೇ ಇದ್ದರು. ನಾವು ರಕ್ಷಣೆ ಮಾಡಿದವರಲ್ಲಿ ಬಹುಪಾಲು ಮಹಿಳೆಯರೇ ಆಗಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಡಿಎನ್ಎ ಪರೀಕ್ಷೆ: ಈ ದುರ್ಘಟನೆಯಲ್ಲಿ ಮೃತಪಟ್ಟ 27 ಜನರ ಪೈಕಿ ಇದುವರೆಗೆ ಕೇವಲ 7 ಜನರ ಗುರುತು ಮಾತ್ರ ಪತ್ತೆಯಾಗಿದೆ. ಉಳಿದವರ ಗುರುತು ಪತ್ತೆಗಾಗಿ, ವಿಧಿವಿಜ್ಞಾನ ತಜ್ಞರ ತಂಡದಿಂದ ಡಿಎನ್ಎ ಪರೀಕ್ಷೆ ಮಾಡಿಸಲಾಗುತ್ತಿದೆ. ಅನೇಕರು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಟ್ಟಡದ ಮಾಲೀಕ ಅರೆಸ್ಟ್ : ಇತ್ತ, ಕಟ್ಟಡದ ಮಾಲೀಕ ಮನೀಶ್ ಲಕ್ರಾನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಹರಿಯಾಣ ಮತ್ತು ದೆಹಲಿಯಲ್ಲಿ ತೀವ್ರ ಶೋಧ ನಡೆಸಿದ ಬಳಿಕ ಮಾಲೀಕ ಮನೀಶ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಕೂಡ ಅಗ್ನಿ ದುರಂತಕ್ಕೀಡಾದ ಕಟ್ಟಡದ ಕೊನೆಯ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದ. ಬೆಂಕಿ ಕಾಣಿಸಿಕೊಂಡ ಬಳಿಕ ಕಟ್ಟಡದಿಂದ ಜಿಗಿದು ಪರಾರಿಯಾಗಿದ್ದ ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಅಗ್ನಿ ದುರಂತ; ಪ್ರಾಣ ಉಳಿಸಿಕೊಳ್ಳಲು ಕಟ್ಟದಿಂದ ಜಿಗಿದ ಜನ.. ಬೆಂಕಿಯ ಕೆನ್ನಾಲಿಗೆ ದೃಶ್ಯ ಹೇಗಿತ್ತು ನೋಡಿ