ಮುಂಬೈ: ಆನ್ಲೈನ್ ಗೇಮ್ ಆಡಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಅನೇಕ ಘಟನೆಗಳು ಈಗಾಗಲೇ ನಡೆದಿದ್ದು, ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಬ್ಜಿ (PUBG) ಆಡಲು ಹೋಗಿ ಅಮ್ಮನ ಖಾತೆಯಿಂದ 10 ಲಕ್ಷ ರೂಪಾಯಿ ಕಳೆದುಕೊಂಡ ಬಳಿಕ, 16 ವರ್ಷದ ಬಾಲಕನೋರ್ವ ಮನೆ ಬಿಟ್ಟು ಹೋಗಿರುವ ಘಟನೆ ಜೋಗೇಶ್ವರಿಯ ಪಶ್ಚಿಮ ಉಪನಗರದಲ್ಲಿ ನಡೆದಿದೆ.
ಬುಧವಾರ ಸಂಜೆ ಮಗ ನಾಪತ್ತೆಯಾಗಿದ್ದಾನೆಂದು ಬಾಲಕನ ತಂದೆ ಎಂಐಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆತ ಅಪ್ರಾಪ್ತನಾಗಿದ್ದರಿಂದ ಪೊಲೀಸರು ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿದರು.
ತನಿಖೆ ವೇಳೆ, ಬಾಲಕ ಪಬ್ಜಿ ಆಟಕ್ಕೆ ಅಟ್ಟಿಕೊಂಡಿದ್ದನೆಂದು ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಪಬ್ಜಿ ಆಡುತ್ತಿದ್ದ ವೇಳೆ, ತನ್ನ ತಾಯಿಯ ಅಕೌಂಟ್ನಿಂದ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆಂದು ತಿಳಿದು ಬಂದಿದೆ. ಈ ವೇಳೆ ಪೋಷಕರು, ಅಪ್ರಾಪ್ತನಿಗೆ ರೇಗಿದ್ದರಿಂದ ಅವನು ಪತ್ರ ಬರೆದಿಟ್ಟು ಮನೆಬಿಟ್ಟು ಹೋಗಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟ: ನಾಲ್ವರು ಆತ್ಮಹತ್ಯೆಗೆ ಯತ್ನ, ಇಬ್ಬರು ಸಾವು
ಮಾಹಿತಿ ಆಧರಿಸಿ ಶೋಧ ಕಾರ್ಯಕ್ಕಿಳಿದ ಪೊಲೀಸರು, ಗುರುವಾರ ಮಧ್ಯಾಹ್ನ ಬಾಲಕನನ್ನು ಅಂಧೇರಿಯ ಮಹಾಕಾಳಿ ಗುಹೆ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಮತ್ತೆ ಈ ತಪ್ಪು ಮಾಡದಂತೆ ಪೊಲೀಸರು ಬಾಲಕನಿಗೆ ಬುದ್ದಿ ಹೇಳಿ ಪೋಷಕರೊಂದಿಗೆ ಕಳಿಸಿದ್ದಾರೆ.