ಮುಂಬೈ(ಮಹಾರಾಷ್ಟ್ರ) : ಗೃಹ ಸಚಿವ ಅಮಿತ್ ಶಾ ಅವರು ಮುಂಬೈ ಭೇಟಿ ನೀಡಿದ ಬೆನ್ನಲ್ಲೇ ಸ್ಥಳೀಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು, ಓರ್ವನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಶೋಕ್ ಮುಖಿಯಾ ಎಂದು ಗುರುತಿಸಲಾಗಿದೆ. ಬೆದರಿಕೆ ಹಾಕಿದ್ದರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇಂದು ಬೆಳಗ್ಗೆ ಆರೋಪಿ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಲೋಕಲ್ ಟ್ರೈನ್ಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದ. ಪೊಲೀಸರು ಯಾವ ರೈಲು, ಸ್ಥಳ ಎಂಬ ಬಗ್ಗೆ ಮಾಹಿತಿ ಕೇಳಿದಾಗ, ಕಾಲ್ ಕಟ್ ಮಾಡಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಆತಂಕದ ವಾತಾವರಣ ಉಂಟಾದ ಬಳಿಕ ತಕ್ಷಣವೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದರು.
ಆರೋಪಿಯ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಯಿತು.
ಆರೋಪಿ ಅರೆಸ್ಟ್; ಇನ್ನು, ಫೋನ್ ಕರೆ ಬಂದ ಮಾಹಿತಿ ಆಧಾರದ ಅನ್ವಯ ಕಾಲ್ ಟ್ರ್ಯಾಕ್ ಮಾಡಿ ಆರೋಪಿ ಮುಖಿಯಾ ಎಂಬಾತನನ್ನು ಬಂಧಿಸಿದ್ದಾರೆ. ಈತ ಯಾಕಾಗಿ ಬೆದರಿಕೆ ಹಾಕಿದ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಮಗ್ರ ತನಿಖೆಯ ಬಳಿಕವೇ ಸತ್ಯ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭದ್ರತಾ ಏಜೆನ್ಸಿಗಳು ಹೈ ಅಲರ್ಟ್ನಲ್ಲಿವೆ. ಪುಣೆಯಲ್ಲಿ ಬೆದರಿಕೆ ಹಾಕಿದ್ದ ನಾಲ್ವರನ್ನು ಅಲ್ಲಿನ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಬಂಧನದ ಬಳಿಕ ಶಂಕಿತ ದಾಳಿಯನ್ನು ತಡೆಯಲಾಗಿತ್ತು. ಬಂಧಿತ ಉಗ್ರರಿಗೆ ಬಾಂಬ್ ತಯಾರಿಸುವ ಜ್ಞಾನವಿತ್ತು. ಇವರು ಐಸಿಸ್ ಸಂಘಟನೆಯ ಸಂಪರ್ಕದಲ್ಲಿದ್ದರು ಎಂದು ತಿಳಿಸಿದ್ದರು.
ಭಯೋತ್ಪಾದಕರ ಯತ್ನ ವಿಫಲ: ಬಂಧಿತ ನಾಲ್ವರು ಭಯೋತ್ಪಾದಕರು ತಮ್ಮ ಸಹಚರರೊಂದಿಗೆ ಕೆಲವು ಯುವಕರನ್ನು ಐಸಿಸ್‌ಗೆ ಸೇರಿಸಿಕೊಂಡಿದ್ದರು ಎಂದು ಎನ್‌ಐಎ ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಉಗ್ರರಿಗೆ ಬಾಂಬ್‌ಗಳನ್ನು ತಯಾರಿಸುವ ತಾಂತ್ರಿಕ ಜ್ಞಾನವಿತ್ತು. ಬೇರೆ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಳ್ಳಲು ಪ್ರಯತ್ನ ನಡೆಸಲಾಗಿತ್ತು. ಬಂಧಿತ ಉಗ್ರರು ಐಸಿಸ್ ಮಾಡ್ಯೂಲ್‌ಗಳನ್ನು ನಡೆಸುತ್ತಿದ್ದಾರೆ ಎಂದು ಎನ್‌ಐಎ ಶಂಕಿಸಿದೆ. ಭಯೋತ್ಪಾದಕರು ತಮ್ಮ ಭಾರತ ವಿರೋಧಿ ಅಜೆಂಡಾವನ್ನು ಮುಂದುವರಿಸುವ ಪ್ರಯತ್ನವನ್ನು ಭದ್ರತಾ ಸಂಸ್ಥೆಗಳು ವಿಫಲಗೊಳಿಸಿವೆ ಎಂದು ಅಮಿತ್ ಶಾ ಹೇಳಿದ್ದರು.
ಇದನ್ನೂ ಓದಿ: ನಾರ್ಕೋ ಭಯೋತ್ಪಾದನೆ: ಎಲ್ಟಿಟಿಇ ಮಾಜಿ ಸದಸ್ಯರಿಗೆ ಪಾಕ್ ಡ್ರಗ್ ಪೆಡ್ಲರ್ ನಂಟು, ಸಂಘಟನೆ ಸಕ್ರಿಯಕ್ಕೆ ಹಣ ಸಂಗ್ರಹಣೆ?