ಮುಂಬೈ: ಕೇರಳ ಮೂಲದ ಡಿಪ್ಲೊಮಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದು ಆತನನ್ನು ಮುಂಬೈ ಸೈಬರ್ ಠಾಣೆ ಪೊಲೀಸರು ರಕ್ಷಿಸಿದರು.
30 ವರ್ಷದ ಡಿಪ್ಲೊಮಾ ವಿದ್ಯಾರ್ಥಿ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದ. ಈ ಟ್ವೀಟ್ ಗಮನಿಸಿದ ಪತ್ರಕರ್ತರೊಬ್ಬರು ಸೈಬರ್ ಪೊಲೀಸ್ ಠಾಣೆಗೆ ವಾಟ್ಸಾಪ್ ಮೂಲಕ ಶನಿವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು, ಕೂಡಲೇ ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಕೊನೆಗೆ ವಿದ್ಯಾರ್ಥಿ ದಾದರ್‌ನಲ್ಲಿರುವ ಐಷಾರಾಮಿ ಹೋಟೆಲ್‌ವೊಂದರಲ್ಲಿ ಇರುವುದಾಗಿ ಗೊತ್ತಾಗಿದೆ.
ಇನ್ಸ್‌ಪೆಕ್ಟರ್ ಸಂಜಯ್ ಗೋವಿಲ್ಕರ್ ಮತ್ತು ಹೋಟೆಲ್ ಮ್ಯಾನೇಜರ್ ನೇತೃತ್ವದ ತಂಡ ನಕಲಿ ಕೀ ಬಳಸಿ ಕೊಠಡಿಯ ಬಾಗಿಲು ತೆರೆದು ನೋಡಿದಾಗ, ವಿದ್ಯಾರ್ಥಿ ಚಾಕುವಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಪ್ರಿಯತಮೆ ಮದುವೆಯಾಗುವುದಿಲ್ಲ ಎಂದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನ ಜೊತೆ ರಾಜಕೀಯ ನಾಯಕರೊಬ್ಬರು ಟ್ವಟರ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಸಂವಹನ ನಡೆಸಿ ಬುದ್ಧಿ ಮಾತು ಹೇಳಿ, ಆತುರದ ಹೆಜ್ಜೆ ಇಡದಂತೆ ನೋಡಿಕೊಂಡಿದ್ದಾರೆ ಎಂದಿದ್ದಾರೆ.