ಮುಂಬೈ(ಮಹಾರಾಷ್ಟ್ರ): ಮುಂಬೈನ ನಾಲ್ಕು ಸ್ಥಳಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅನಾಮಧೇಯ ದೂರವಾಣಿ ಕರೆ ಬಂದಿದೆ. ನಗರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಬೈಕುಲ್ಲಾ ಮತ್ತು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆ ಬಳಿ ಬಾಂಬ್ ಇಡಲಾಗಿದೆ ಎಂದು ಫೋನ್ ಕರೆ ಮೂಲಕ ಶುಕ್ರವಾರ ರಾತ್ರಿ ಬೆದರಿಕೆಯೊಡ್ಡಲಾಗಿದೆ.
ರಾತ್ರಿ 9 ರ ಸುಮಾರಿಗೆ ರೈಲ್ವೆ ಇಲಾಖೆಗೆ ಅನಾಮಧೇಯ ಬೆದರಿಕೆ ಕರೆ ಬಂದಿದೆ. ವ್ಯಕ್ತಿಯೋರ್ವ ಕರೆ ಮಾಡಿ, ಸಿಎಸ್‌ಎಂಟಿ, ದಾದರ್, ಬೈಕುಲ್ಲಾ ಮತ್ತು ಅಮಿತಾಬ್ ಬಚ್ಚನ್ ಅವರ ಬಂಗಲೆಗಳ ಬಳಿ ಬಾಂಬ್ ಇಡಲಾಗಿದೆ ಎಂದಿದ್ದಾನೆ. ತಕ್ಷಣ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮುಂಬೈ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಜಾಗೃತವಾಗಿದ್ದು, ಈ ಎಲ್ಲ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಸಿಎಸ್‌ಎಂಟಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಶೋಧ ಕಾರ್ಯ ನಡೆಸಲಾಗಿದೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.
ಅಲ್ಲದೆ, ಕರೆ ಬಂದ ಸಂಖ್ಯೆಗೆ ಮರಳಿ ಫೋನ್ ಮಾಡಿದರೆ, 'ನನ್ನಲ್ಲಿರುವ ಮಾಹಿತಿಯನ್ನು ನಾನು ನಿಮಗೆ ನೀಡಿದ್ದೇನೆ. ಈಗ ನನ್ನನ್ನು ತೊಂದರೆ ನೀಡಬೇಡಿ' ಎಂದು ವ್ಯಕ್ತಿ ಹೇಳಿದ್ದಾನೆ. ತದನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಕರೆಯಿಂದ ರೈಲ್ವೆ ನಿಲ್ದಾಣದಲ್ಲಿ ಭೀತಿ ಉಂಟಾಗಿತ್ತು. ನಿಲ್ದಾಣದಲ್ಲಿನ ಶೌಚಾಲಯ, ಕ್ಯಾಟರಿಂಗ್ ಸ್ಟಾಪ್, ಟಿಕೆಟ್ ಕೌಂಟರ್ ಸೇರಿದಂತೆ ಎಲ್ಲೆಡೆ ಪರಿಶೀಲಿಸಲಾಗುತ್ತಿದೆ. ರೈಲ್ವೆ ಸೇವೆಯ ಮೇಲೆ ಪರಿಣಾಮ ಬೀರಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ರೈಲುಗಳು ಸಂಚರಿಸುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.