ಮುಂಬೈ(ಮಹಾರಾಷ್ಟ್ರ): ಬಿಜೆಪಿಯ ಜನಾಶೀರ್ವಾದ ಯಾತ್ರೆ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ನಿನ್ನೆ ಒಂದೇ ದಿನ 13 ಪ್ರಕರಣಗಳು ಸೇರಿದಂತೆ ಒಟ್ಟು 36 ಎಫ್‌ಐಆರ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಘಾಟ್ಕೋಪರ್ ಮತ್ತು ಖಾರ್ ಠಾಣಾ ವ್ಯಾಪ್ತಿಯಲ್ಲಿ ತಲಾ 2 ಎಫ್‌ಐಆರ್‌ಗಳು ದಾಖಲಾಗಿದ್ದರೆ, ಮುಲುಂಡ್, ವಿಕ್ರೋಲಿ, ಭಂಡುಪ್, ಪಂತನಗರ, ಸಾಂತಾಕ್ರೂಜ್, ಪೊವಾಯಿ, ಎಂಐಡಿಸಿ, ಸಕಿನಾಕ ಮತ್ತು ಮೇಘವಾಡಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಎಫ್‌ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಐಪಿಸಿ ಸೆಕ್ಷನ್ 188, ವಿಪತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್ 51 ಹಾಗೂ ಮುಂಬೈ ಪೊಲೀಸ್ ಕಾಯ್ದೆಯ ಸೆಕ್ಷನ್ 135ರ ಅಡಿ ಕೇಸ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸಿ ಅವರಿಂದ ಆಶೀರ್ವಾದ ಪಡೆಯಲು ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆಯನ್ನು ದೇಶಾದ್ಯಂತ ಆರಂಭಿಸಿದ್ದರು.