ಚೆನ್ನೈ(ತಮಿಳುನಾಡು): ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಗೆ ಉತ್ತರಿಸುವಾಗ ನ್ಯಾಯಾಂಗ ನಿಂದನೆ ಮಾಡಿದ್ದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಜಿ.ಸಂಪತ್ ಕುಮಾರ್ ಅವರಿಗೆ ತಮಿಳುನಾಡಿನ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿತು. ಇದೇ ವೇಳೆ, ನ್ಯಾಯಾಲಯವು ಈ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತಿನಲ್ಲಿರಿಸಿ, ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರು ಎಳೆದುತಂದ ಕಾರಣಕ್ಕಾಗಿ ಸಂಪತ್ ಕುಮಾರ್ ವಿರುದ್ಧ ಎಂ.ಎಸ್.ಧೋನಿ 2014ರಲ್ಲಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಅರ್ಜಿ ಹೂಡಿದ್ದರು. ಈ ಅರ್ಜಿಗೆ ಲಿಖಿತ ಉತ್ತರ ನೀಡುವಾಗ ಅಧಿಕಾರಿ ಸಂಪತ್ ಕುಮಾರ್ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಬಗ್ಗೆ ಅವಹೇಳನಕಾರಿ ಹೇಳಿಕೆ ಉಲ್ಲೇಖಿಸಿದ್ದಾರೆ ಎಂಬುದು ಆರೋಪ.
ಪ್ರಕರಣದ ಹಿನ್ನೆಲೆ: ಸಂಪತ್ ಕುಮಾರ್ 1997ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. 2013ರಲ್ಲಿ ತಮಿಳುನಾಡು ಪೊಲೀಸ್‌ನ 'ಕ್ಯೂ ಬ್ರಾಂಚ್'ನಲ್ಲಿ (ಆಂತರಿಕ ಭದ್ರತೆ) ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಬೆಟ್ಟಿಂಗ್ ಹಗರಣವನ್ನು ಬಯಲಿಗೆಳೆದಿದ್ದರು. ಬೆಟ್ಟಿಂಗ್ ಜೊತೆಗೆ ಫಿಕ್ಸಿಂಗ್, ಮೋಸದಾಟದಂತಹ ಇತರ ಕೃತ್ಯಗಳೊಂದಿಗೆ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರುಗಳೂ ಬೆಳಕಿಗೆ ಬಂದಿದ್ದವು.
ಆದರೆ, 2014ರಲ್ಲಿ ಬೆಟ್ಟಿಂಗ್ ಹಗರಣದ ಆರೋಪಿ ಬುಕ್ಕಿಯೊಬ್ಬರಿಂದ ಲಂಚ ಪಡೆದ ಆರೋಪದ ಮೇಲೆ ಸಂಪತ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಆರೋಪದಿಂದ ಅವರು ಮುಕ್ತರಾಗಿ ಸೇವೆಗೆ ಮರಳಿದ್ದರು. ಇದರ ನಡುವೆ ಹಗರಣದಲ್ಲಿ ತಮ್ಮ ಹೆಸರು ಎಳೆದುತಂದ ಕಾರಣಕ್ಕಾಗಿ ಧೋನಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಲಿಖಿತ ಉತ್ತರ ನೀಡುವಾಗ ನ್ಯಾಯಾಂಗ ನಿಂದನೆ ಮಾಡಿದ ಆರೋಪವನ್ನು ಅಧಿಕಾರಿ ಎದುರಿಸಿದ್ದರು.
ಈ ವೇಳೆ, ಸರ್ಕಾರಿ ಸೇವೆಯಲ್ಲಿದ್ದ ಕಾರಣ ಪ್ರಕರಣ ಮುಂದುವರೆಸಲು ಅಡ್ವೊಕೇಟ್ ಜನರಲ್ ಒಪ್ಪಿಗೆ ಸೂಚಿಸಿದ್ದರು. ಅಂತೆಯೇ, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಪಿ.ಎನ್.ಪ್ರಕಾಶ್ ಮತ್ತು ಆರ್.ಎಂ.ಟಿ. ಟೀಕಾರಾಮನ್ ಅವರು ಈ ಹಿಂದೆ ಅಧಿಕಾರಿಗೆ ನೋಟಿಸ್ ನೀಡಿ ವಿವರಣೆ ನೀಡುವಂತೆ ಸೂಚಿಸಿದ್ದರು.
ಇದನ್ನೂ ಓದಿ: ಕೊರಿಯರ್ ಕಂಪನಿ ಹೆಸರಲ್ಲಿ ಕರೆ, ವೆರಿಫಿಕೇಷನ್ ನೆಪದಲ್ಲಿ 1.98 ಕೋಟಿ ರೂಪಾಯಿ ವಂಚನೆ