ರಾಂಚಿ (ಜಾರ್ಖಂಡ್) : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂ.ಎಸ್. ಧೋನಿ) ಅವರು ಶುಕ್ರವಾರ (ಜುಲೈ 7ರಂದು) 42ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕ್ರಿಕೆಟ್ ಐಕಾನ್‌ಗೆ ಸೆಲೆಬ್ರೆಟಿಗಳೂ ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. 'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತಿ ಪಡೆದ ಧೋನಿ, ಸಾಮಾಜಿಕ ಮಾಧ್ಯಮದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಆದರೂ, ಈ ಬಾರಿಯ ಹುಟ್ಟುಹಬ್ಬ ಆಚರಣೆಯ ವಿಡಿಯೋವೊಂದನ್ನು ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಧೋನಿ ತಮ್ಮ ಹುಟ್ಟುಹಬ್ಬವನ್ನು ತಮ್ಮ ಮುದ್ದಿನ ಸಾಕು ನಾಯಿಗಳ ಆಚರಿಸಿಕೊಂಡಿದ್ದು ಹೀಗೆ..
ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಗೆ ಧನ್ಯವಾದ ಹೇಳಿದ ಧೋನಿ : ಮಹೇಂದ್ರ ಸಿಂಗ್ ಧೋನಿ ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಗೆ ಇನ್ಸ್ಸ್ಟಾಗ್ರಾಮ್ನಲ್ಲಿ ಧನ್ಯವಾದ ಹೇಳಿದ್ದಾರೆ. ತಮ್ಮ ಸಾಕು ನಾಯಿಗಳೊಂದಿಗೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋಗೆ ಕೊಟ್ಟ ಶೀರ್ಷಿಕೆಯಲ್ಲಿ "ನಿಮ್ಮೆಲ್ಲರ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು. ನನ್ನ ಜನ್ಮದಿನದಂದು ನಾನು ಏನು ಮಾಡಿದ್ದೇನೆ ಎಂಬುದರ ಒಂದು ನೋಟ" ಎಂದು ಬರೆದು, ಪ್ರೀತಿಯ ಶ್ವಾನಗಳಿಗೆ ಕೇಕ್ ತಿನ್ನಿಸುವ ದೃಶ್ಯ ಪೋಸ್ಟ್ ಮಾಡಿದ್ದಾರೆ.
ಹುಟ್ಟುಹಬ್ಬದಂದು ಮನೆಯಲ್ಲೇ ಇದ್ದ ಧೋನಿ : ಧೋನಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಸೂರ್ಯಕುಮಾರ್ ಯಾದವ್ವರೆಗೆ ಮಾಜಿ ಹಾಗೂ ಹಾಲಿ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದರು.
ಇದನ್ನೂ ಓದಿ : ಧೋನಿ ಫಾರ್ಮ್ ಹೌಸ್ ಹೊರಗೆ ಅಭಿಮಾನಿಗಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ
ಐಪಿಎಲ್‌ನಿಂದ ನಿವೃತ್ತಿಯಾಗಿಲ್ಲ ಧೋನಿ : ಮಹೇಂದ್ರ ಸಿಂಗ್ ಧೋನಿ ಅವರು 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅವರ ನಾಯಕತ್ವದಲ್ಲಿ ಭಾರತ ತಂಡ 2007ರ ಟಿ20 ವಿಶ್ವಕಪ್ ಗೆದ್ದಿತ್ತು. 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ನಾಯಕರೂ ಆಗಿದ್ದರು. ಇದೀಗ ಧೋನಿ ನಿರಂತರವಾಗಿ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ ವರ್ಷ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಧೋನಿ ಬ್ಯಾಟಿಂಗ್ನಲ್ಲಿ ಮೊದಲಿನಂತೆ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ, ನಾಯಕತ್ವದ ಮೂಲಕ ಇಡೀ ಟೂರ್ನಿಯಲ್ಲಿ ಛಾಪು ಮೂಡಿಸಿದ್ದಾರೆ. ಚಾಂಪಿಯನ್ ಕ್ಯಾಪ್ಟನ್, ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಫಿನಿಷರ್, ಒತ್ತಡದ ಸಮಯದಲ್ಲಿ ಅದ್ಭುತ ನಿರ್ಧಾರಗಳನ್ನು ತೆಗೆದುಕೊಳ್ಳುವ ಚಾಣಕ್ಯ ಎಂಬ ಬಿರುದಿಗೂ ಅವರು ಪಾತ್ರರಾಗಿದ್ದಾರೆ.
ಇದನ್ನೂ ಓದಿ : MS Dhoni :ಹೈದರಾಬಾದ್ನಲ್ಲಿ ಕ್ಯಾಪ್ಟನ್ ಕೂಲ್ ಧೋನಿ ಹುಟ್ಟುಹಬ್ಬಕ್ಕೆ 52 ಅಡಿ ಕಟೌಟ್.. ಮುಂಗಡ ಉಡುಗೊರೆ ನೀಡಿದ ಫ್ಯಾನ್ಸ್