ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಭೂಪೇಂದರ್ ಯಾದವ್ ನೇತೃತ್ವದ ಒಬಿಸಿ ಸಂಸದರ ನಿಯೋಗ, ನೀಟ್ (NEET) ಯುಜಿ ಮತ್ತು ಪಿಜಿಯ ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮತ್ತು ಅರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ ಸರಿಯಾದ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.
ನೀಟ್ ಅಡಿ ನಿಗದಿಪಡಿಸಿರುವ ಆಲ್ ಇಂಡಿಯಾ ಕೋಟಾದಲ್ಲಿ ಎಂಬಿಬಿಎಸ್ ಮತ್ತು ಎಂಡಿ - ಎಂಎಸ್ ಕೋರ್ಸ್‌ಗಳಿಗೆ ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಮೀಸಲು ವ್ಯವಸ್ಥೆಯನ್ನು ಸರಿಯಾಗಿ ಜಾರಿಗೆ ತರಬೇಕೆಂದು ಸಂಸದರ ನಿಯೋಗ ಪ್ರಧಾನಿಯನ್ನು ಆಗ್ರಹಿಸಿದೆ.
ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಸಚಿವ ಯಾದವ್, ದೇಶಕ್ಕೆ ಸ್ವಾತಂತ್ರ್ಯ ಬಂದು ಬಹಳ ಸಮಯದ ಬಳಿಕ ಮೋದಿಯವರ ನೇತೃತ್ವದಲ್ಲಿ, ಹಿಂದುಳಿದವರು, ದಲಿತರು, ಪರಿಶಿಷ್ಟ ಪಂಗಡಗಳನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ದಶಕಗಳಿಂದ ಬಾಕಿ ಇದ್ದ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡುವ ಪ್ರಕ್ರಿಯೆಯನ್ನು ಸರ್ಕಾರ ಮಾಡಿದೆ ಎಂದರು.
ಓದಿ : ಕೃಷಿ ಭೂಮಿ ಹೊಂದಿರದ ಕುಟುಂಬಗಳಿಗೆ ಈ ಸರ್ಕಾರದ ಭರ್ಜರಿ ಗಿಫ್ಟ್!
ಆರ್ಥಿಕವಾಗಿ ಹಿಂದುಳಿದಿರುವ ವರ್ಗ (ಇಡಬ್ಲ್ಯೂಎಸ್) ಗಳಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ .10 ರಷ್ಟು ಮೀಸಲು ನೀಡಲು ನಿರ್ಧರಿಸುವ ಮೂಲಕ ಮೋದಿ ಸರ್ಕಾರ ಎಲ್ಲ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾನತೆ ಕಲ್ಪಿಸಿದೆ ಎಂದರು.
ನೀಟ್ ನಿಯಮ ಪ್ರಕಾರ, ರಾಜ್ಯ ಸರ್ಕಾರಿ ಕಾಲೇಜುಗಳು ಮತ್ತು ಖಾಸಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಟ್ಟು ಸೀಟ್ಗಳ ಪೈಕಿ, ಪದವಿ ಪೂರ್ವ (ಎಂಬಿಬಿಎಸ್) ಕೋರ್ಸ್‌ಗಳಿಗೆ ಶೇ.15 ಸೀಟ್ಗಳು ಮತ್ತು ಆಲ್ ಇಂಡಿಯಾ ಕೋಟಾದಲ್ಲಿ ಸ್ನಾತಕೋತ್ತರ (ಎಂಡಿ-ಎಂಎಸ್) ಗೆ ಶೇ.50 ರಷ್ಟು ಮೀಸಲಿಡುವುದು ಅಗತ್ಯವಾಗಿದೆ ಎಂಬ ಅಂಶವನ್ನು ಸಂಸದರು ಪ್ರಧಾನಿಯ ಗಮನಕ್ಕೆ ತಂದಿದ್ದಾರೆ.