ಶಹದೋಲ್ (ಮಧ್ಯಪ್ರದೇಶ ): ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲು ಕಟ್ನಿ- ಚೋಪನ್ ರೈಲ್ವೆ ಮಾರ್ಗದಲ್ಲಿ ಹೋಗುತ್ತಿತ್ತು. ಈ ವೇಳೆ, ಇದ್ದಕ್ಕಿದ್ದಂತೆ ಗೂಡ್ಸ್ ರೈಲಿನ 6 ಬೋಗಿಗಳು ಹಳಿತಪ್ಪಿದವು. ಇದರಿಂದಾಗಿ ಕಟ್ನಿ-ಸಿಂಗ್ರೌಲಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಹಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಹಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ. ಭಾನುವಾರ ರಾತ್ರಿ 2:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂಬುದು ತಿಳಿದು ಬಂದಿದೆ. ಈ ಗೂಡ್ಸ್ ರೈಲು ಕಟ್ನಿಯಿಂದ ಸಿಂಗ್ರೌಲಿ ಕಡೆಗೆ ಹೋಗುತ್ತಿತ್ತು. ಅಪಘಾತದ ನಂತರ, ಈ ರೈಲು ಮಾರ್ಗದಲ್ಲಿ ಬರುವ ಮತ್ತು ಹೋಗುವ 16 ಗೂಡ್ಸ್ ರೈಲುಗಳು ಮತ್ತು ಪ್ಯಾಸೆಂಜರ್ ರೈಲುಗಳು ಈ ಅವಘಡದಿಂದ ತೊಂದರೆಗೀಡಾಗಿವೆ ಎಂಬುದು ತಿಳಿದು ಬಂದಿದೆ.
ಮಾರ್ಗ ಮರುಸ್ಥಾಪಿಸಲು 24 ಗಂಟೆ ಬೇಕು : ಅಧಿಕಾರಿಗಳ ಪ್ರಕಾರ, ಸೋಮವಾರ ತಡರಾತ್ರಿಯೊಳಗೆ ಇಲ್ಲಿಂದ ರೈಲುಗಳ ಸಂಚಾರವನ್ನು ಪುನಃಸ್ಥಾಪಿಸಬಹುದು. ಈ ಬಗ್ಗೆ ಜಬಲ್‌ಪುರ ರೈಲ್ವೆ ವಲಯದ ಡಿಆರ್‌ಎಂ ವಿವೇಕಶೀಲ್ ಅವರು ಮಾತನಾಡಿ, ರಾತ್ರಿ ಮಾಹಿತಿ ಬಂದ ತಕ್ಷಣ ರೈಲ್ವೆ ಅಧಿಕಾರಿಗಳು ಇಲ್ಲಿಗೆ ತಲುಪಿದ್ದು, ರಕ್ಷಣಾ ಕಾರ್ಯವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಸುಮಾರು 750 ಮೀಟರ್ ರೈಲು ಮಾರ್ಗ ಹಾಳಾಗಿದೆ. ಅದರ ಸುಧಾರಣೆ ಕಾರ್ಯಕ್ಕೆ ಸಮಯ ಹಿಡಿಯುತ್ತದೆ. ರೈಲಿನ ಆರು ಬೋಗಿಗಳು ಸಂಪೂರ್ಣ ಪಲ್ಟಿಯಾಗಿದ್ದು, ಮೂರು ಬೋಗಿಗಳು ಹಳಿ ತಪ್ಪಿವೆ. ಈ ಮಾರ್ಗ ಸರಿಪಡಿಸಲು ರೈಲ್ವೆಯು ವೇಗವಾಗಿ ಕೆಲಸ ಮಾಡುತ್ತಿದೆ. ರೈಲ್ವೆಯ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಆದರೆ, ಯಾವುದೇ ರೀತಿಯ ಪ್ರಾಣಹಾನಿ ಆಗಿಲ್ಲ ಎಂಬುದು ಸಮಾಧಾನದ ಸಂಗತಿ ಎಂದು ಮಾಹಿತಿ ನೀಡಿದ್ದಾರೆ.
ರೈಲು ಸಂಚಾರಕ್ಕೆ ತೊಂದರೆಯಾಗಿ ಪ್ರಯಾಣಿಕರಿಗೆ ಸಮಸ್ಯೆ : ರೈಲು ಮಾರ್ಗ ದುರಸ್ತಿಗೆ 24 ಗಂಟೆ ಬೇಕು. ಸುಧಾರಣಾ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ಹಿರಿಯ ಅಧಿಕಾರಿಗಳ ತಂಡವನ್ನೂ ರಚಿಸಲಾಗಿದ್ದು, ಈ ಅವಘಡ ಹೇಗೆ ಸಂಭವಿಸಿತು? ಎಂಬುದನ್ನು ಅವರು ಪತ್ತೆ ಮಾಡಲಿದ್ದಾರೆ. ರೈಲು ಭೋಗಿಗಳು ಹಳಿ ತಪ್ಪಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಯಿತು. ಅಪಘಾತದಿಂದ ರೈಲ್ವೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈಗ ಸೋಮವಾರ ತಡರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ವೇಳೆಗೆ ಸುಧಾರಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು