ಭೋಪಾಲ್ (ಮಧ್ಯಪ್ರದೇಶ): ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮಧ್ಯಪ್ರದೇಶ ಸಜ್ಜಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಹೈ ಪ್ರೊಫೈಲ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಬುಧ್ನಿ ವಿಧಾನಸಭಾ ಕ್ಷೇತ್ರ ಸದ್ಯ ಹೆಚ್ಚು ಸೆನ್ಸೇಶನಲ್ ಆಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಭದ್ರಕೋಟೆಯಾಗಿ ಇದುವರೆಗೆ ಬುಧ್ನಿ ವಿಧಾನಸಭಾ ಕ್ಷೇತ್ರ ಸುದ್ದಿಯಲ್ಲಿತ್ತು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಾಲಿವುಡ್ ನಟ ವಿಕ್ರಮ್ ಮಸ್ತಾನ್ ಹಾಗೂ ಮಿರ್ಚಿ ಬಾಬಾ ಎಂದೇ ಖ್ಯಾತರಾಗಿರುವ ವೈರಾಗ್ಯಾನಂದ್ ಅವರ ಸ್ಪರ್ಧೆಯಿಂದ ಈ ಕ್ಷೇತ್ರ ದೇಶಾದ್ಯಂತ ಹೆಚ್ಚು ಸುದ್ದಿಯಲ್ಲಿದೆ.
ಬಿಜೆಪಿ ನಾಯಕ ಚೌಹಾಣ್ ವಿರುದ್ಧ ಬುಧ್ನಿಯಿಂದ ಜನಪ್ರಿಯ ನಟ, ರಾಮಾಯಣ ಧಾರಾವಾಹಿಯ ಹನುಮಂತ ಪಾತ್ರದಾರಿ ಖ್ಯಾತಿಯ ವಿಕ್ರಮ್ ಮಸ್ತಲ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇನ್ನೊಂದೆಡೆ ಸಮಾಜವಾದಿ ಪಕ್ಷ ಮಿರ್ಚಿ ಬಾಬಾ ಅವರನ್ನು ಕಣಕ್ಕಿಳಿಸಿದೆ. ಮೂರು ಹೈ ಪ್ರೊಫೈಲ್ ಅಭ್ಯರ್ಥಿಗಳು ಕಣಕ್ಕಿಳಿದಿರುವ ಬುಧ್ನಿ ಕ್ಷೇತ್ರ ಈ ಬಾರಿ ಚುನಾವಣಾ ಅಖಾಡವನ್ನು ಮತ್ತಷ್ಟು ರಂಗೇರುವಂತೆ ಮಾಡಿದೆ. ನಾಳೆ ನಡೆಯಲಿರುವ ಚುನಾವಣೆಯಲ್ಲಿ ಜನ ಯಾರ ಕೈ ಹಿಡಿಯಲ್ಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಎಸ್ಪಿ ನಡುವಣ ಪೈಪೋಟಿ ಮತ್ತಷ್ಟು ಕಾವೇರಿದೆ. ಅದರಲ್ಲೂ ಇದೀಗ ಬುಧ್ನಿ ವಿಧಾನಸಭಾ ಕ್ಷೇತ್ರ ಹೆಚ್ಚು ಸೆನ್ಸೇಷನಲ್ ಆಗಿದೆ.
ವಿಕ್ರಮ್ ಮಸ್ತಲ್ ಅವರು ರಾಮಾಯಣ ಧಾರಾವಾಹಿಯಲ್ಲಿ ಹನುಮಾನ್ ಪಾತ್ರ ನಿರ್ವಹಿಸಿ ಹೆಚ್ಚು ಹೆಸರುವಾಸಿಯಾಗಿದ್ದರು. 40 ವರ್ಷದ ಈ ನಟ ಈ ವರ್ಷದ ಜುಲೈನಲ್ಲಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2018ರಿಂದ ವಿವಾದಗಳಲ್ಲಿ ಸಿಲುಕಿರುವ ಮಿರ್ಚಿ ಬಾಬಾ ಅವರಿಗೆ ಸಮಾಜವಾದಿ ಪಕ್ಷ ಈ ಬಾರಿ ಮಣೆ ಹಾಕಿದೆ.
ಸಿಎಂ ವಿರುದ್ಧ ಕಣದಲ್ಲಿರುವ ಬಾಲಿವುಡ್ ನಟ: ಇಲ್ಲಿಂದಲೇ ಸ್ಪರ್ಧಿಸಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಈ ಕ್ಷೇತ್ರದ ಬಗ್ಗೆ ಚೌಹಾಣ್ ಅವರಿಗೆ ಎಷ್ಟು ವಿಶ್ವಾಸವಿದೆ ಎಂದರೆ, ಮತ ಕೇಳಲು ಚೌಹಾಣ್ ಕ್ಷೇತ್ರದ ಜನರ ಬಳಿ ಹೋಗುವುದಿಲ್ಲ. ಚೌಹಾಣ್ ಅವರಿಗಾಗಿ ಸಂಪೂರ್ಣವಾಗಿ ಅವರ ಪತ್ನಿ ಸಾಧನಾ ಸಿಂಗ್ ಹಾಗೂ ಪುತ್ರರು ಪ್ರಚಾರ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ವಿಕ್ರಮ್ ಮಸ್ತಲ್ ಅವರನ್ನು ಬುಧ್ನಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಸಿರುವುದರಿಂದ ಈ ಬಾರಿ ಸ್ಪರ್ಧೆ ಹೆಚ್ಚು ಕುತೂಹಲಕಾರಿಯಾಗಿದೆ.
ಬುಧ್ನಿ ಸಮೀಪದ ಸೆಹೋರ್ ಜಿಲ್ಲೆಯಲ್ಲಿ ಜನಿಸಿರುವ ವಿಕ್ರಮ್ ಮಸ್ತಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ’’ಬುಧ್ನಿಯ ಸ್ಥಿತಿ ನೋಡಿ ಬೇಸರಗೊಂಡು, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದೆ‘‘ ಎಂದು ಹೇಳಿದ್ದಾರೆ. ಬುಧ್ನಿ ಕ್ಷೇತ್ರದಲ್ಲಿ ಮತಯಾಚನೆ ವೇಳೆ ವಿಕ್ರಮ್ ಮಸ್ತಲ್ ಸ್ವತಃ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಅಣ್ಣನ ಬಳಿಯೂ ಮತ ನೀಡುವಂತೆ ಮನವಿ ಮಾಡಿದ್ದು ವಿಶೇಷ.
ಮಿರ್ಚಿ ಖಾರ ಎಷ್ಟಿದೆ?: ಅತ್ಯಾಚಾರ ಆರೋಪದಿಂದ ಮುಕ್ತಿ ಪಡೆದು ರಾಜಕೀಯಕ್ಕೆ ಬಂದ ಮಿರ್ಚಿ ಬಾಬಾ ಅವರನ್ನು ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ತಮ್ಮ ರಾಜಕೀಯ ಕಸರತ್ತುಗಳಿಂದಾಗಿ ಮಿರ್ಚಿ ಬಾಬಾ ಸುದ್ದಿಯಲ್ಲಿದ್ದಾರೆ. ಇಂದು ಕೂಡ ಮಹಿಳಾ ಮತದಾರರಿಗೆ ಸೀರೆ ಹಂಚಿದ್ದಕ್ಕಾಗಿ ಮಿರ್ಚಿ ಬಾಬಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಮೂರು ಹೈ ಪ್ರೊಫೈಲ್ ಅಭ್ಯರ್ಥಿಗಳ ಸ್ಪರ್ಧೆಯಿಂದ ಬಿಸಿಯಾಗಿರುವ ಬುಧ್ನಿ ಕ್ಷೇತ್ರಕ್ಕೆ ಈ ಘಟನೆ ಹೊಸ ಆಯಾಮವನ್ನು ನೀಡಿದೆ.
ಬುಧ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಚೌಹಾಣ್: ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆರನೇ ಬಾರಿಗೆ ಬುಧ್ನಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅದಲ್ಲದೇ ನಾಲ್ಕು ಬಾರಿ ಇದೇ ಕ್ಷೇತ್ರದಿಂದ ಗೆದ್ದು ಸಿಎಂ ಆಗಿರುವ ಚೌಹಾಣ್, ಈ ಬಾರಿ ಚುನಾವಣಾ ಪ್ರಚಾರಕ್ಕೆ ಹೋಗದೇ ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. 1990ರಲ್ಲಿ ಮೊದಲ ಬಾರಿಗೆ ಬುಧ್ನಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿದ್ದರು. ನಂತರ 2006ರಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ನಂತರ 2008 ರಿಂದ 2018ರವರೆಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನಿರಂತರವಾಗಿ ಮೂರು ಬಾರಿ ಬುಧ್ನಿಯಿಂದ ಸ್ಪರ್ಧಿಸಿ, ಗೆದ್ದು ಬೀಗಿದ್ದರು. ಜೊತೆಗೆ ಮುಖ್ಯಮಂತ್ರಿಯೂ ಆಗಿದ್ದರು.
ಇದನ್ನೂ ಓದಿ: ತೆಲಂಗಾಣ ಅಸೆಂಬ್ಲಿ ಜೊತೆಗೆ ಲೋಕ ಕದನ ಗೆಲ್ಲಲು ಬಿಜೆಪಿ ರಣತಂತ್ರ: ಬೂತ್ಮಟ್ಟದಿಂದಲೇ ಪಕ್ಷ ಬಲವರ್ಧನೆಗೆ ಒತ್ತು