ಜಬಲ್ಪುರ(ಮಧ್ಯ ಪ್ರದೇಶ): ಇಲ್ಲಿನ ಎರಡು ಗಿಡದಲ್ಲಿ ಬೆಳೆದ ಏಳು ಮಾವಿನ ಹಣ್ಣುಗಳಿಗೆ ಇಲ್ಲೊಬ್ಬ ಕೃಷಿಕ ಬಿಗಿ ಭದ್ರತೆ ಕೊಟ್ಟಿದ್ದಾನೆ. ಇದೇನು ಸಾಮಾನ್ಯ ಭದ್ರತೆ ಅಲ್ಲ ಬಿಡಿ.
ಈ ಗಿಡಗಳಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಕಾಯಲು ಆರು ಶ್ವಾನಗಳಿವೆ. ಅಷ್ಟೇ ಏಕೆ? ಇವುಗಳ ಜೊತೆಗೆ ನಾಲ್ಕು ಮಂದಿ ಕಾವಲುಗಾರರು ಕಣ್ಣಲ್ಲಿ ಕಣ್ಣಿಟ್ಟು ಅವುಗಳನ್ನು ಕಾಯುತ್ತಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದ ಸಂಕಲ್ಪ ಹಾಗೂ ರಾಣಿ ಪರಿಹಾರ್ ದಂಪತಿ ಈ ಅಪರೂಪದ, ಸ್ವಾದಿಷ್ಟ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ. ತಮ್ಮ ತೋಟದಲ್ಲಿ ಎರಡು ವರ್ಷಗಳ ಹಿಂದೆ ಈ ಸಸಿಗಳನ್ನು ನೆಟ್ಟಿದ್ದು, ಅದೀಗ ನಿರೀಕ್ಷೆಯಂತೆ ಫಲ ಕೊಡುತ್ತಿವೆ. ಈ ದುಬಾರಿ ಮಾವಿಗೆ ಕಳ್ಳರ ಕಾಟವೂ ಕಾಡುತ್ತಿದೆ.
ಹೀಗಾಗಿ, ಕಷ್ಟಪಟ್ಟು ಬೆಳೆದ ಈ ಮಾವಿನ ಹಣ್ಣುಗಳು ಕಳ್ಳರ ಪಾಲಾಗುವುದನ್ನು ತಡೆಯಲು ಕೃಷಿಕ ದಂಪತಿ ಒಂಬತ್ತು ಭದ್ರತಾ ಸಿಬ್ಬಂದಿ ಹಾಗೂ ಆರು ಶ್ವಾನಗಳನ್ನು ನಿಯೋಜಿಸಿದ್ದಾರೆ. ಇದಕ್ಕಾಗಿ ಪ್ರತಿ ತಿಂಗಳು 50 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಮಾಡುತ್ತಿದ್ದಾರಂತೆ.
ರೈಲಿನಲ್ಲೊಮ್ಮೆ ಪ್ರಯಾಣಿಸುವಾಗ ವ್ಯಕ್ತಿಯೊಬ್ಬರು ಈ ಮಾವಿನ ಗಿಡ ಕೊಟ್ಟಿದ್ದರು ಎಂದು ದಂಪತಿ ಹೇಳುತ್ತಾರೆ.
ಮೊದಲು ಈ ಹಣ್ಣಿನ ವಿಶೇಷತೆ ಕುರಿತು ದಂಪತಿಗೆ ತಿಳಿದಿರಲಿಲ್ಲ. ಅಪರೂಪದ ಮಾವಿನ ತಳಿ ಬಗ್ಗೆ ನಂತರ ತಿಳಿದುಬಂದಿದ್ದು, ಹಣ್ಣುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದುದರಿಂದ ಇಷ್ಟೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ತಳಿಗೆ 'ದಿಮಿನಿ' ಎಂದು ಹೆಸರಿಟ್ಟಿದ್ದಾರೆ.
ಜಪಾನ್ ಮೂಲದ ಮಾವು
ಅತಿ ಹೆಚ್ಚಿನ ಬೆಲೆಗೆ ಜಪಾನ್ ಮೂಲದ ಈ Taiyo No Tamago ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಹೀಗಾಗಿಯೇ ಇದನ್ನು ವಿಶ್ವದಲ್ಲೇ ಅತಿ ದುಬಾರಿ ಮಾವಿನ ತಳಿ ಎಂದು ಕರೆಯಲಾಗಿದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 2.70 ಲಕ್ಷ ರೂಗೆ ಮಾರಾಟವಾಗಿತ್ತು ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ಈ ಹಣ್ಣಿಗೆ ಏಕಿಷ್ಟು ಬೆಲೆ ಎಂಬುದರ ಕುರಿತು ಸೂಕ್ತ ಉಲ್ಲೇಖಗಳು ಸಿಗುತ್ತಿಲ್ಲ. ಈ ಹಣ್ಣುಗಳ ಉತ್ಪಾದನೆ ಕಡಿಮೆ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎಂಬ ಮಾಹಿತಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಸಿಗುತ್ತವೆ. ಒಂದೊಂದು ಹಣ್ಣುಗಳು ಅಂದಾಜು 350 ಗ್ರಾಂ ತೂಕವಿರುತ್ತವೆ. ಈ ಹಣ್ಣುಗಳಲ್ಲಿ ಶೇ.15ರಷ್ಟು ಸಕ್ಕರೆ ಅಂಶ ಇದೆ. ಹಳದಿ ಪೆಲಿಕಾನ್ ಮಾವು ತಳಿಗಿಂತ ಇದು ಸ್ವಲ್ಪ ಭಿನ್ನವಾಗಿದೆ. ಇದನ್ನು ಆಗ್ನೇಯ ಏಷ್ಯಾ ದೇಶಗಳಲ್ಲಿ ಹೆಚ್ಚು ಬೆಳೆಯುತ್ತಾರಂತೆ. ಇದಕ್ಕೆ ಜಪಾನಿಗರು 'ಸೂರ್ಯನ ಮೊಟ್ಟೆ' ಎಂತಲೂ ಕರೆಯುತ್ತಾರೆ.
ಕೆಲವು ಇಂಟರೆಸ್ಟಿಂಗ್ ವಿಚಾರಗಳು..
1. ಯಥೇಚ್ಛ ಪ್ರಮಾಣದಲ್ಲಿ ಬೀಟಾ ಕ್ಯಾರೋಟಿನ್, ಪಾಲಿಕ್ ಆ್ಯಸಿಡ್ ಹೊಂದಿವೆ. ಇದು ಕಣ್ಣಿನ ದೃಷ್ಠಿ ಬೆಳವಣಿಗೆ ಹಾಗು ಮಂದ ದೃಷ್ಠಿ ಹೊಂದಿರುವವರಿಗೆ ಒಳ್ಳೆಯದು.
2. ಜಪಾನಿನ ವಾತಾವರಣ, ಮಣ್ಣಿನ ಫಲವತ್ತತೆ ಈ ಹಣ್ಣು ಬೆಳೆಯಲು ಪೂರಕವಾಗಿದೆ.
3. ಈ ಹಣ್ಣುಗಳಲ್ಲಿ ಶೇ.15ರಷ್ಟು ಸಕ್ಕರೆ ಅಂಶ ಇದೆ.
4. ಹಳದಿ ಪೆಲಿಕಾನ್ ಮಾವು ತಳಿಗಿಂತ ಇದು ಸ್ವಲ್ಪ ಭಿನ್ನ
5. ಜಪಾನಿಗರು 'ಸೂರ್ಯನ ಮೊಟ್ಟೆ' ಎಂದು ಈ ಹಣ್ಣುಗಳನ್ನು ಕರೆಯುತ್ತಾರೆ.