ಭೋಪಾಲ್ (ಮಧ್ಯ ಪ್ರದೇಶ): ಬಾಲಿವುಡ್ ನಟಿ ಕಂಗನಾ ರಣಾವತ್ ರೈತರ ಬಗ್ಗೆ ನೀಡಿರುವ ಹೇಳಿಕೆಗೆ ರಾಜ್ಯದ ವಿವಿಧ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ನಗರದಲ್ಲಿ ನಡೆಯುತ್ತಿರುವ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಈ ಹಿನ್ನೆಲೆ, ನಟಿ ಕಂಗನಾಗೆ ಮಧ್ಯಪ್ರದೇಶ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ನಟಿ ಕಂಗನಾ ರಣಾವತ್ ಧಾಕಡ್ ಚಿತ್ರದ ಶೂಟಿಂಗ್ನಲ್ಲಿ ನಿರತರಾಗಿದ್ದು, ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಸರ್ನಿಯಲ್ಲಿ ಫಿಲ್ಮ್ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ರಾಜ್ಯದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಲ ನಾಯಕರು ಈ ಚಿತ್ರೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಂಗನಾಗೆ ಜೀವ ಬೆದರಿಕೆಯನ್ನೂ ಸಹ ಹಾಕಿದ್ದಾರೆ ಎನ್ನಲಾಗಿದೆ.
ನಟಿ ಕಂಗನಾ ರಣಾವತ್ ದೇಶದ ರೈತರ ಬಗ್ಗೆ ಹೀಯಾಳಿಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಉಗ್ರರು ಎಂದು ಕರೆದಿದ್ದು, ಇದು ರೈತಾಪಿ ವರ್ಗಕ್ಕೆ ಮಾಡಿದ ಅವಮಾನವಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸೇವಾ ದಳ ಕಿಡಿಕಾರಿದೆ.
ಸರ್ನಿ ಪಟ್ಟಣದಿಂದ 45 ಕಿಮೀ ದೂರದಲ್ಲಿರುವ ರೆಸಾರ್ಟ್‌ನಲ್ಲಿ ಕಂಗನಾ ತಂಗಿದ್ದು, ಹೋಟೆಲ್ ಹಾಗೂ ಸಿನಿಮಾ ಚಿತ್ರೀಕರಣ ನಡೆಯುವ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಅದಲ್ಲದೆ ಅವರ ಸುರಕ್ಷತೆಯ ಮೇಲ್ವಿಚಾರಣೆಗಾಗಿ ಓರ್ವ ಇನ್ಸ್‌ಪೆಕ್ಟರ್‌ನನ್ನು ಸಹ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಯ್ ರಾಮ್ ಚೌಧರಿ ಹೇಳಿದ್ದಾರೆ.