ಮಿರ್ಜಾಪುರ(ಉತ್ತರ ಪ್ರದೇಶ): ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ಮೊದಲು ಬಾವಿಗೆ ತಳ್ಳಿ, ಬಳಿಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಮಿರ್ಜಾಪುರ ಜಿಲ್ಲೆಯ ಸಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಜ್ರಾ ಗ್ರಾಮದಲ್ಲಿ ಇಂದು (ಶನಿವಾರ) ಮುಂಜಾನೆ ನಡೆದಿದೆ. ಬಾವಿಗೆ ಬಿದ್ದ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆ: ಮಹಿಳೆ ಚಂದಾ ಆಗಿದ್ದು, ಅಮರ್ಜಿತ್ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳು ಇದ್ದರು. ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಮಹಿಳೆ ತನ್ನ ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ (ಶುಕ್ರವಾರ) ಮಹಿಳೆ ಫೋನ್ ಕಾಲ್ನಲ್ಲಿ ತನ್ನ ಪತಿಯೊಂದಿಗೆ ಮಾತನಾಡಿದ್ದು, ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಬೇಸತ್ತ ಮಹಿಳೆ ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ್ದಾರೆ.
ನಂತರ ಮನೆಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿಯ ಜ್ವಾಲೆಯನ್ನು ತಾಳಲಾರದೇ ಮಹಿಳೆ ಕೂಗಾಡಿದ್ದಾರೆ. ಚೀರಾಟ ಕೇಳಿ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ. ನಂತರ ಮಹಿಳೆ ಬಳಿ ಮಕ್ಕಳ ಬಗ್ಗೆ ಕೇಳಿದಾಗ ಬಾವಿಯಲ್ಲಿದ್ದಾರೆ ಎಂದು ತಿಳಿಸಿದ್ದಾಳೆ. ತಕ್ಷಣ ಬಾವಿಯನ್ನು ಪರಿಶೀಲಿಸಿದ ಗ್ರಾಮಸ್ಥರು ಮಕ್ಕಳು ನೀರಿನಲ್ಲಿ ಮುಳುಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರು ಮಕ್ಕಳ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ
ಆಕಾಶ್ (08), ಕೃತಿ (02) ಮತ್ತು ಅನು (01) ಮೃತಗೊಂಡ ದುರ್ದೈವಿ ಮಕ್ಕಳು. ಮಕ್ಕಳಿಗಾಗಿ ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಮೊದಲು ಮಕ್ಕಳಾದ ಕೃತಿ ಮತ್ತು ಅನು ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಗಂಟೆಗಳ ನಂತರ ಆಕಾಶ್ ಶವ ಪತ್ತೆಯಾಗಿತ್ತು. ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಒಪಿ ಸಿಂಗ್ ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಪತ್ನಿ ಕೊಂದು ಪೊಲೀಸರಿಗೆ ಪತಿ ಶರಣು: ದಂಪತಿ ಮಧ್ಯೆ ಕೆಲಸದ ವಿಚಾರಕ್ಕೆ ಕಲಹ ನಡೆದು ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ. ಪತಿ ಹಣಮಂತ ಆರೋಪಿಯಾಗಿದ್ದು, ಯಾವುದೇ ಕೆಲಸ ಮಾಡದೇ ಓಡಾಡಿಕೊಂಡಿದ್ದನಂತೆ. ಪತ್ನಿ ಬಸವ್ವ ಕೂಲಿ ಕೆಲಸ ಮಾಡಿ ಸಂಸಾರದ ಬಂಡಿ ಸಾಗಿಸುತ್ತಿದ್ದರು. ಪತಿ ಹಣಮಂತನಿಗೆ ನೀನು ಕೆಲಸ ಮಾಡುತ್ತಿಲ್ಲ ಎಂದು ಆಗಾಗ ಬಸವ್ವ ತಗಾದೆ ತೆಗೆಯುತ್ತಿದ್ದರಂತೆ. ಇದರಿಂದ ದಂಪತಿಯ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗೆ ಶುಕ್ರವಾರ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಇದನ್ನೂ ಓದಿ: ಮೇಲ್ಜಾತಿ ಯುವತಿಯ ಪ್ರೀತಿಸಿದ್ದ ವಿದ್ಯಾರ್ಥಿ ಕೊಲೆ ಕೇಸ್: 8 ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್