ಸುಲ್ತಾನ್‌ಪುರ (ಉತ್ತರ ಪ್ರದೇಶ): ವರದಕ್ಷಿಣೆಗಾಗಿ ಗೃಹಿಣಿ ಮತ್ತು ಆಕೆಯ ಮೂರು ವರ್ಷದ ಮಗಳಿಗೆ ಅತ್ತೆ ಮನೆಯವರು ಬೆಂಕಿ ಹಚ್ಚಿದ್ದರಿಂದ ಇಬ್ಬರೂ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಲಕ್ಷ್ಮೀ ಮತ್ತು ಅವರ ಮೂರು ವರ್ಷದ ಕಂದಮ್ಮ ಮೃತರು ಎಂದು ಗುರುತಿಸಲಾಗಿದೆ.
ಇಲ್ಲಿನ ಕಡಿಪುರ ಪ್ರದೇಶದ ನಿವಾಸಿಯ ಅರವಿಂದ್ ಚೌರಾಸಿಯಾ ಎಂಬುವವರಿಗೆ 2018ರ ಮೇ ತಿಂಗಳಲ್ಲಿ ಲಕ್ಷ್ಮೀಯನ್ನು ಮದುವೆ ಕೊಡಲಾಗಿತ್ತು. ಅತ್ತೆ ಮನೆಯಲ್ಲಿ ಅಂದಿನಿಂದ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ತಾಯಿ ಬರ್ಫಾ ದೇವಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ವರದಕ್ಷಿಣೆಗಾಗಿ ತಾಯಿ ಮತ್ತು ಮಗಳಿಗೆ ಅತ್ತೆ ಮನೆಯವರು ಬೆಂಕಿ ಹಚ್ಚಿದ್ದರು. ಇದರಿಂದ ಇಬ್ಬರೂ ಭಾನುವಾರ ಮೃತಪಟ್ಟಿದ್ದಾರೆ. ಸದ್ಯ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಲಕ್ಷ್ಮೀ ಪತಿ ಅರವಿಂದ್ ಚೌರಾಸಿಯಾ, ಆಕೆಯ ಅತ್ತೆ ಮತ್ತು ಮಾವ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಗಾಗಲೇ ಆರೋಪಿ ಪತಿ ಅರವಿಂದ್ನನ್ನು ಬಂಧಿಸಿದ್ದು, ಇತರ ಆರೋಪಿಗಳ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮೆನ್ ಬರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಆಕೆಯ 10 ತಿಂಗಳ ಮಗುವನ್ನು ಹೊರ ಎಸೆದು ಕೊಲೆ ಆರೋಪ