ವಾರಣಾಸಿ (ಉತ್ತರ ಪ್ರದೇಶ): ಭೀಕರ ಪ್ರವಾಹಕ್ಕೆ ಉತ್ತರ ಪ್ರದೇಶದ ಜನರು ತತ್ತರಿಸಿದ್ದಾರೆ. ರಾಜ್ಯದ 75 ಜಿಲ್ಲೆಗಳ ಪೈಕಿ 24 ಜಿಲ್ಲೆಗಳ 600ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಸುಳಿಯಲ್ಲಿ ಸಿಲುಕಿವೆ. 100ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ.
ಗಂಗಾ ನದಿ ಹರಿಯುವ ಪ್ರಯಾಗರಾಜ್, ಗಾಜೀಪುರ ಮತ್ತು ಬಲ್ಲಿಯಾದಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಮುನಾ ನದಿ ಕೂಡ ಅಪಾಯದ ಮಟ್ಟ ಮೀರಿದೆ. ಪ್ರಯಾಗರಾಜ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 12 ಪಟ್ಟು ಅಧಿಕ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾದ ವಾರಣಾಸಿಯೂ ಭಾರೀ ಮಳೆಗೆ ಸಾಕ್ಷಿಯಾಗಿದೆ. ಗಂಗಾ ಘಾಟ್‌ಗಳಲ್ಲಿ ಶವ ಸಂಸ್ಕಾರ ಮಾಡಲು ಸಮಸ್ಯೆ ಎದುರಾಗಿದೆ. ವಾರಣಾಸಿ ಜಿಲ್ಲಾಡಳಿತದೊಂದಿಗೆ ಮಾತನಾಡಿರುವ ಪಿಎಂ ಮೋದಿ ಎಲ್ಲಾ ರೀತಿಯ ಸಹಾಯದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಹಿಮಾಚಲದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 13ಕ್ಕೆ ಏರಿಕೆ, 13 ಮಂದಿ ರಕ್ಷಣೆ
ಪ್ರವಾಹಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಲೌನ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಪರಿಹಾರ ಕಾರ್ಯಾಚರಣೆಗಾಗಿ ಮೂರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.
ಸೋಮವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಸ್ಥಿತಿಯ ಅವಲೋಕನಕ್ಕಾಗಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ರಾಜ್ಯ ಸರ್ಕಾರವು 800ಕ್ಕೂ ಹೆಚ್ಚು ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಿದೆ.