ಕೋಲ್ಕತ್ತಾ: ಬಿಜೆಪಿಯ ನಾಲ್ವರು ಶಾಸಕರು ಶೀಘ್ರದಲ್ಲೇ ಟಿಎಂಸಿ ಸೇರುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದ ಎಲ್ಲಾ ಬಿಜೆಪಿ ಶಾಸಕರ ಜತೆ ಚರ್ಚಿಸಬೇಕೆಂದು ಬಂಗಾಳದ ಬಿಜೆಪಿ ಹಿರಿಯ ನಾಯಕರು ಒತ್ತಾಯಿಸುತ್ತಿದ್ದಾರೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖರಗ್‌ಪುರದ ಹಿರಣ್ ಚಟ್ಟೋಪಾಧ್ಯಾಯ, ಡಾರ್ಜಿಲಿಂಗ್‌ನ ನೀರಜ್ ಜಿಂಬಾ, ಕೂಚ್ ಬೆಹಾರ್ (ಉತ್ತರ)ದ ಸುಕುಮಾರ್ ರಾಯ್ ಮತ್ತು ಬಂಕುರಾ ಜಿಲ್ಲೆಯ ಸೋನಾಮುಖಿಯಿಂದ ದಿವಾಕರ್ ಘರಾಮಿ ಬಿಜೆಪಿ ತೊರೆಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗ್ತಿದೆ.
ಈ ನಾಲ್ವರು ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗಿದ್ದರು. ಮಾತ್ರವಲ್ಲದೇ, ರಾಜ್ಯ ಬಿಜೆಪಿ ಘಟಕಕ್ಕೆ ನೇಮಕಗೊಂಡಿದ್ದ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮಕ್ಕೂ ಇವರು ಹಾಜರಾಗಿರಲಿಲ್ಲ. ರಾಷ್ಟ್ರೀಯ ಬಿಜೆಪಿ ಉಪಾಧ್ಯಕ್ಷ ದಿಲೀಪ್ ಘೋಷ್, ಸಭೆಯಲ್ಲಿ ಎಲ್ಲರೂ ಹಾಜರಿರುವಂತೆ ಸೂಚಿಸಿದ್ದರೂ ಇವರು ಹಾಜರಾಗಿರಲಿಲ್ಲ. ಶಾಸಕರ ಈ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಆದ್ರೆ, ಬಿಜೆಪಿ ಈ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದೆ. ಈ ನಾಲ್ವರು ಶಾಸಕರು ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಆದರೂ, ತೃಣಮೂಲ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ. ಬಿಜೆಪಿ ಶಾಸಕರು ಯಾರೂ ಪಕ್ಷ ತೊರೆಯುತ್ತಿಲ್ಲ. ವದಂತಿಗಳೆಲ್ಲ ನಿರಾಧಾರವಾಗಿವೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಪ. ಬಂಗಾಳ ಮುಖ್ಯಮಂತ್ರಿ
ಇದೇ ವರ್ಷ ನಡೆದ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ 77 ಶಾಸಕರು ಆಯ್ಕೆಯಾದರು. ಅದರಲ್ಲಿ ನಿಶಿತ್ ಪ್ರಮಾಣಿಕ ಮತ್ತು ಜಗನ್ನಾಥ್ ಸರ್ಕಾರ್ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ನಾಲ್ವರು ಎಂಎಲ್ಎಗಳು ರಾಜೀನಾಮೆ ನೀಡಿದ್ರು. ಶಾಸಕ ಕೃಷ್ಣ ಕಲ್ಯಾಣಿ ಪಕ್ಷ ತೊರೆದಿದ್ದು ಸದ್ಯ ಬಿಜೆಪಿಯಲ್ಲಿ 70 ಶಾಸಕರಿದ್ದಾರೆ. ಕೃಷ್ಣ ಕಲ್ಯಾಣಿ ಕೂಡ ಟಿಎಂಸಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಬಿಜೆಪಿ ಹೆಚ್ಚು ಶಾಸಕರನ್ನು ಕಳೆದುಕೊಂಡರೆ, ಪಕ್ಷಕ್ಕೆ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ ಶಾಸಕರ ಸಂಖ್ಯೆ 69 ಕ್ಕಿಂತ ಕೆಳಕ್ಕೆ ಇಳಿದರೆ, ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಕುಸಿಯುತ್ತದೆ. ಪ್ರಸ್ತುತ ಬಲದಿಂದ, ಬಿಜೆಪಿ ಇಬ್ಬರು ಸದಸ್ಯರನ್ನು ಸಂಸತ್ತಿನ ಮೇಲ್ಮನೆಗೆ ಕಳುಹಿಸಬಹುದು.