ಹುಜ್ರಾಬಾದ್/ತೆಲಂಗಾಣ : ಕರೀಂನಗರ ಜಿಲ್ಲೆಯ ಹುಜ್ರಾಬಾದ್ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಲು ಪ್ರಮುಖ ರಾಜಕೀಯ ಪಕ್ಷಗಳು ಮತದಾರರಿಗೆ ಹಣದ ಆಮಿಷ ಒಡ್ಡುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ಮತದಾರರಿಗೆ ಕವರ್ನಲ್ಲಿಟ್ಟು ಹಣ ಹಂಚಿಕೆ ಮಾಡುತ್ತಿರುವುದನ್ನು ಕಾಣಬಹುದು. ಪ್ರತಿ ಕವರ್ನಲ್ಲಿ 6,000 ರಿಂದ 10,000 ರೂ.ವರೆಗೆ ಹಣ ಇಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಹಣ ವಿತರಣೆ ಕಾರ್ಯವನ್ನು ಓರ್ವ ಸ್ಥಳೀಯ ನಾಯಕರು ನೂರು ಜನರಿಗೆ ವಹಿಸಿದ್ದಾರೆ ಎನ್ನಲಾಗಿದೆ.
ಹುಜ್ರಾಬಾದ್ನಲ್ಲಿ ಪ್ರಚಾರದ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಪಕ್ಷಗಳು ಇದೀಗ ತೆರೆಮರೆಯಲ್ಲಿ ಹಣ ಹಂಚುವ ಮೂಲಕ ವೋಟ್ ಗಿಟ್ಟಿಸಲು ಮುಂದಾಗಿವೆ. ಈಗಾಗಲೇ ಹಲವೆಡೆ ಮದ್ಯದ ಬಾಟಲಿಗಳನ್ನು ಹಂಚಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಆಯಾ ಪಕ್ಷಗಳು ಮಾಂಸಾಹಾರ, ಮದ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹಂಚುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ. ಮಾಜಿ ಸಚಿವ ಈಟೆಲ ರಾಜೇಂದರ್ ರಾಜೀನಾಮೆ ನೀಡಿ ಬಿಜೆಪಿ ಸೇರುವ ಮೂಲಕ ಹುಜ್ರಾಬಾದ್ ಬೈ ಎಲೆಕ್ಷನ್ ಮಹತ್ವ ಪಡೆದುಕೊಂಡಿದೆ.