ಸಮಸ್ತಿಪುರ(ಬಿಹಾರ): ಹೆಣ್ಣು ಮಕ್ಕಳು ಸಂಕಷ್ಟ ಅನುಭವಿಸಿದ್ರೆ ಅವರು ಅದನ್ನು ಮೊದಲು ಹೇಳುವುದು ತನ್ನ ಕುಟುಂಬ ಸದಸ್ಯರ ಮುಂದೆ. ಆದರೆ, ಅವರೇ ಹೀನ ಕೃತ್ಯದಲ್ಲಿ ಭಾಗಿಯಾದರೆ? ಇಂಥದ್ದೊಂದು ಅತ್ಯಂತ ಅಮಾನವೀಯ ಪ್ರಕರಣ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.
ಮಗಳಿಗೆ ರಕ್ಷಣೆ ನೀಡಬೇಕಾದ ತಂದೆಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ದುಷ್ಕೃತ್ಯದ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ತಾಯಿಯ ಕೈವಾಡವನ್ನೂ ಬಯಲಿಗೆಳೆದಳು.
ಸಿಂಘಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಘಟನೆ ನಡೆದಿದೆ. ತಂದೆ, ಚಿಕ್ಕಪ್ಪ ಸೇರಿದಂತೆ ಪ್ರತಿದಿನ 20 ರಿಂದ 25 ಮಂದಿ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದಾರೆ. ಪೊಲೀಸ್ ಠಾಣೆಯಿಂದ ಬರುವ ಸಿಬ್ಬಂದಿಯೂ ಸಹ ತನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ.
ಇದನ್ನೂ ಓದಿ: 'ಅಮಿತ್ ಶಾ ಈ ಕೆಲಸ ಮೊದಲೇ ಮಾಡಿದ್ದರೆ, ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುತ್ತಿತ್ತು'
ಹಣಕ್ಕೋಸ್ಕರ ಆಕೆಯನ್ನು ಈ ಕೃತ್ಯಕ್ಕಾಗಿ ಬಳಸಿಕೊಳ್ಳಲಾಗಿದ್ದು, ಭಾಗಿಯಾಗಲು ನಿರಾಕರಿಸಿದಾಗ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು. ಮನೆಯಲ್ಲಿ ತಾಯಿ ಮದ್ಯ ಮಾರಾಟ ಮಾಡುತ್ತಾಳೆ. ಇಲ್ಲಿಗೆ ಬರುವ ಪೊಲೀಸ್ ಠಾಣೆಯ ಸಿಬ್ಬಂದಿ ಮದ್ಯ ಸೇವಿಸಿ, ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಗ್ರಾಮ ಪಂಚಾಯಿತಿ ಮಾಜಿ ಮುಖ್ಯಸ್ಥನೂ ಇಲ್ಲಿಗೆ ಬಂದು ಹೇಯವಾಗಿ ನಡೆದುಕೊಂಡ ಎಂದು ಅಳಲು ತೋಡಿಕೊಂಡಳು.
ಪ್ರತಿದಿನ ನನ್ನ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಉಸಿರುಗಟ್ಟಿ ಜೀವನ ನಡೆಸುತ್ತಿದ್ದೇನೆ. ಇದಕ್ಕೆ ಪ್ರತಿಭಟನೆ ನಡೆಸಿದಾಗ ಕೊಲೆ ಬೆದರಿಕೆ ಬರುತ್ತವೆ. ತಾಯಿ, ತಂದೆ, ಚಿಕ್ಕಪ್ಪ ಸೇರಿ ಎಲ್ಲರೂ ಹಣಕ್ಕಾಗಿ ಈ ವ್ಯವಹಾರ ನಡೆಸುತ್ತಿದ್ದಾರೆ. ಇದರಿಂದ ನಾನು ರೋಸಿ ಹೋಗಿದ್ದೇನೆ. ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾಳೆ.
ಯುವತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳಾ ಪೊಲೀಸ್ ಠಾಣೆ ಮುಖ್ಯಸ್ಥೆ ಪುಷ್ಪಲತಾ ಸ್ಥಳಕ್ಕಾಗಮಿಸಿ, ಬಾಲಕಿಯ ಪೋಷಕರು ಸೇರಿದಂತೆ ಮೂವರ ಬಂಧಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.