ಅಯೋಧ್ಯೆ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ನಾಳೆ ಅಯೋಧ್ಯೆಗೆ ಭೇಟಿ ನೀಡುವರು. ಈ ಸಂದರ್ಭದಲ್ಲಿ ಸುಮಾರು 15,700 ಕೋಟಿ ರೂ.ಗೂ ಹೆಚ್ಚು ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಹೊಸ ವಿಮಾನ ನಿಲ್ದಾಣ ಹಾಗೂ ನವೀಕರಿಸಿರುವ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವೂ ಸೇರಿ ಹೆದ್ದಾರಿಗಳು, ರೈಲ್ವೇ ಡಬ್ಲಿಂಗ್ ಸೇರಿದಂತೆ ಹಲವು ಯೋಜನೆಗಳನ್ನು ಅವರು ಉದ್ಘಾಟಿಸುವ ಕಾರ್ಯಕ್ರಮಗಳಿವೆ.
ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು 240 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಇದು ಮೂರು ಅಂತಸ್ತಿನ ಕಟ್ಟಡ ಹೊಂದಿದೆ. ಲಿಫ್ಟ್ಗಳು, ಎಸ್ಕಲೇಟರ್ಗಳು, ಫುಡ್ ಪ್ಲಾಜಾಗಳು ಮತ್ತು ಮಕ್ಕಳ ಆರೈಕೆ ಕೊಠಡಿಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಮುಖ್ಯವಾಗಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (IGBC) ವತಿಯಿಂದ ಹಸಿರು ನಿಲ್ದಾಣ ಕಟ್ಟಡವೆಂಬ ಪ್ರಮಾಣಪತ್ರ ನಿಲ್ದಾಣಕ್ಕೆ ದೊರೆತಿದೆ.
ಧರ್ಬಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ರೈಲುಗಳಿಗೂ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಳಿಗ್ಗೆ ಸುಮಾರು 11.15ಕ್ಕೆ ಅಮೃತ್ ಭಾರತ್ ರೈಲುಗಳಿಗೆ ಅವರು ಚಾಲನೆ ನೀಡುವರು. ಅಮೃತ್ ಭಾರತ್ ಎಕ್ಸ್ಪ್ರೆಸ್ ಹವಾನಿಯಂತ್ರಿತವಲ್ಲದ ಕೋಚ್ಗಳನ್ನು ಹೊಂದಿರುವ ಎಲ್ಹೆಚ್ಬಿ ಪುಶ್-ಪುಲ್ ರೈಲಾಗಿದೆ.
ಆಕರ್ಷಕ ಆಸನ ವಿನ್ಯಾಸಗಳು, ಉತ್ತಮ ಲಗೇಜ್ ರ್ಯಾಕ್ಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳು, ಎಲ್ಇಡಿ ಲೈಟ್ಗಳು, ಸಿಸಿಟಿವಿ ಮತ್ತು ಸಾರ್ವಜನಿಕ ಮಾಹಿತಿ ವ್ಯವಸ್ಥೆ ಸೇರಿದಂತೆ ಸುಧಾರಿತ ಸೌಕರ್ಯಗಳನ್ನು ಇದು ಹೊಂದಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಅಯೋಧ್ಯೆ-ಆನಂದ ವಿಹಾರ್ ಟರ್ಮಿನಲ್, ಶ್ರೀಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ, ಅಮೃತಸರ-ದೆಹಲಿ, ಕೊಯಮತ್ತೂರು-ಬೆಂಗಳೂರು ಕ್ಯಾಂಟ್, ಮಂಗಳೂರು-ಮಡ್ಗಾಂವ್ ಮತ್ತು ಜಲ್ನಾ-ಮುಂಬೈ ಮಾರ್ಗಗಳಲ್ಲಿ ಸಂಚರಿಸಲಿವೆ.
ಇವುಗಳಲ್ಲದೆ, ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ಹೆಚ್ಚಿಸುವ ಭಾಗವಾಗಿ ಪ್ರಧಾನಮಂತ್ರಿ 2,300 ಕೋಟಿ ರೂ. ವೆಚ್ಚದ ಮೂರು ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ರೂಮಾ ಚಕೇರಿ-ಚಾಂದೇರಿ ಮೂರನೇ ಮಾರ್ಗದ ಯೋಜನೆ, ಜೌನ್ಪುರ್-ತುಳಸಿ ನಗರ, ಅಕ್ಬರ್ಪುರ್- ಅಯೋಧ್ಯೆ, ಸೊಹವಾಲ್-ಪತ್ರಾಂಗ ಮತ್ತು ಸಫ್ದರ್ಗಂಜ್-ರಸೌಲಿ ವಿಭಾಗಗಳ ಜೌನ್ಪುರ-ಅಯೋಧ್ಯೆ-ಬಾರಾಬಂಕಿ ಡಬ್ಲಿಂಗ್ ಯೋಜನೆ ಮತ್ತು ಮಲ್ಹಾಪುರ-ಡಾಲಿಗಂಜ್ ರೈಲ್ವೇ ವಿಭಾಗದ ವಿದ್ಯುದೀಕರಣ ಯೋಜನೆಗಳನ್ನು ಇದು ಒಳಗೊಂಡಿದೆ.
15,700 ಕೋಟಿ ರೂ.ಗೂ ಹೆಚ್ಚು ವೆಚ್ಚದ ಯೋಜನೆಗಳಲ್ಲಿ, ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು 11,100 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಉಳಿದಂತೆ ಉತ್ತರ ಪ್ರದೇಶದಾದ್ಯಂತ ಇತರ ಅಭಿವೃದ್ಧಿ ಸಂಬಂಧಿತ ಯೋಜನೆಗಳಿಗೆ 4,600 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಅದಲ್ಲದೆ ನಯಾ ಘಾಟ್ನಿಂದ ಲಕ್ಷ್ಮಣ ಘಾಟ್ವರೆಗಿನ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಮತ್ತು ಸೌಂದರ್ಯೀಕರಣ, ದೀಪೋತ್ಸವದಂತಹ ಕಾರ್ಯಕ್ರಮಗಳಿಗಾಗಿ ಸಂದರ್ಶಕರ ಗ್ಯಾಲರಿ ನಿರ್ಮಾಣ ಮತ್ತು ರಾಮ್ ಕಿ ಪೈಡಿಯಿಂದ ರಾಜ್ ಘಾಟ್ ಹಾಘೂ ರಾಜ್ ಘಾಟ್ನಿಂದ ರಾಮಮಂದಿರದವರೆಗಿನ ಯಾತ್ರಿಕರ ಮಾರ್ಗದ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ. ಅಯೋಧ್ಯೆಯಲ್ಲಿ 2180 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿರುವ ಗ್ರೀನ್ಫೀಲ್ಡ್ ಟೌನ್ಶಿಪ್ಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬಿಗಿ ಭದ್ರತೆ: ಪ್ರಧಾನಿ ಅಯೋಧ್ಯೆ ಭೇಟಿಗೆ ದಾಳಿ ಭೀತಿ ಇರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದು, ಅಯೋಧ್ಯೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಎನ್ಎಸ್ಜಿ, ಎಟಿಎಸ್, ಎಟಿಎಫ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಲಖನೌ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಮೊರ್ಡಿಯಾ, "ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸುವ ಮುನ್ನ ಅವರ ಭದ್ರತೆಯನ್ನು ಬಲ ಪಡಿಸಲು ಉನ್ನತ ಮಟ್ಟದ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ಜಿ) ಹಾಗೂ ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಇಂದು ರೋಡ್ ಶೋ ಪೂರ್ವಾಭ್ಯಾಸ ಮಾಡಲಾಗುವುದು" ಎಂದು ತಿಳಿಸಿದರು.
ಮುಂದುವರಿದು, "ಡ್ರೋನ್ಗಳ ಮೂಲಕ ಈಗಾಗಲೇ ನಾವು ಎಲ್ಲಾ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸಂಚಾರ ದಟ್ಟನೆಯನ್ನು ಸುಧಾರಿಸಲು ಟ್ರಾಫಿಕ್ ಡೈವರ್ಶನ್ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಮೂವರು ಡಿಐಜಿ, 17 ಎಸ್ಪಿ, 38 ಹೆಚ್ಚುವರಿ ಎಸ್ಪಿ, 82 ಡೆಪ್ಯುಟಿ ಎಸ್ಪಿ, 90 ಇನ್ಸ್ಪೆಕ್ಟರ್, 35 ಮಹಿಳಾ ಸಬ್ಇನ್ಸ್ಪೆಕ್ಟರ್, 2000 ಕಾನ್ಸ್ಟೆಬಲ್, 14 ಪಿಎಸಿ, 6 ಸಿಆರ್ಪಿಎಫ್ಗಳನ್ನು ನಿಯೋಜಿಸಲಾಗುವುದು" ಎಂದು ಎಡಿಜಿ ಮೊರ್ಡಿಯಾ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಭೇಟಿಗೂ ಮುನ್ನ ಭದ್ರತಾ ವ್ಯವಸ್ಥೆಗಳ ಸಿದ್ಧತೆಗಳನ್ನು ಪರಿಶೀಲಿಸಿದರು. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಮೊಕ್ಕಾಂ ಹೂಡಿದ್ದು, ಪ್ರಧಾನಿ ಭೇಟಿಯ ಪೂರ್ವಭಾವಿ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಹೊಸ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ನಿರ್ಧಾರ