ನಾಗ್ಪುರ(ಮಹಾರಾಷ್ಟ್ರ): ನಾಗ್ಪುರದ ಮಹಲ್ ಪ್ರದೇಶದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ-ಆರ್‌ಎಸ್‌ಎಸ್ ಕೇಂದ್ರ ಕೇಚರಿಯಲ್ಲಿ ಪೊಲೀಸರು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ-ಎನ್‌ಎಸ್‌ಜಿ ಹಾಗೂ ಇತರ ಏಜೆನ್ಸಿಗಳ ಕಮಾಂಡೋಗಳು ಭಯೋತ್ಪಾದನಾ ವಿರೋಧಿ ಸನ್ನದ್ಧತೆಯ ಅಣಕು ಪ್ರದರ್ಶನ ನೀಡಿದ್ದಾರೆ.
ನಿನ್ನೆ ಬೆಳಗ್ಗೆ 8.30ಕ್ಕೆ ಆರಂಭವಾದ ತಾಲೀಮು ನಾಲ್ಕು ಗಂಟೆಗಳ ಕಾಲ ನಡೆದಿದೆ. ಕೇಂದ್ರೀಯ ಕೈಗಾರಿಕಾ ಪಡೆ (ಸಿಐಎಸ್‌ಎಫ್) ಮತ್ತು ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ) ಸೇರಿದಂತೆ ವಿವಿಧ ಪಡೆಗಳ 300ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಈ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಗಳು, ಅಗ್ನಿಶಾಮಕ ಹಾಗೂ ಆರೋಗ್ಯ ಇಲಾಖೆಗಳ ಸಿಬ್ಬಂದಿ ಈ ಕಸರತ್ತಿಗೆ ಸಹಕರಿಸಿದ್ದಾರೆ. ಮೊದಲು 4 ಭಯೋತ್ಪಾದಕರು ಆರ್‌ಎಸ್‌ಎಸ್ ಕಟ್ಟಡಕ್ಕೆ ಪ್ರವೇಶಿಸಿದ ಸಿಮ್ಯುಲೇಟೆಡ್ ಭದ್ರತಾ ಭಯದ ಪರಿಸ್ಥಿತಿಯನ್ನು ನಿರ್ಮಿಸಲಾಗಿತ್ತು. ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್) ಹಾಗೂ ಶ್ವಾನ ದಳವನ್ನು ಇಲ್ಲಿ ಬಳಸಿಕೊಳ್ಳಲಾಗಿತ್ತು. ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಮೇಲ್ವಿಚಾರಣೆ ಮಾಡಿದರು.
ಭದ್ರತಾ ಪಡೆಗಳ ತುರ್ತು ಸನ್ನದ್ಧತೆಯ ಯೋಜನೆಯನ್ನು ಪರಿಶೀಲಿಸುವುದು ಹಾಗೂ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ (ಎಸ್‌ಒಪಿ) ಅನುಷ್ಠಾನವನ್ನು ಮೌಲ್ಯಮಾಪನ ಮಾಡುವುದು ಅಣಕು ಪ್ರದರ್ಶನದ ಉದ್ದೇಶವಾಗಿತ್ತು ಎಂದು ಅಧಿಕಾರಿ ಹೇಳಿದರು.
ಜಮ್ಮು-ಕಾಶ್ಮೀರದ ನಿವಾಸಿಯಾಗಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಶಂಕಿತ ಉಗ್ರ ರಯೀಸ್ ಅಹ್ಮದ್ ಶೇಖ್ ಅಸದುಲ್ಲಾ ಶೇಖ್ 2021ರ ಜುಲೈನಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಚೇರಿ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ವಿಫಲ ಯತ್ನ ನಡೆಸಿದ್ದ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: 15-15 ದಿನಗಳಂತೆ ಗಂಡನ ಹಂಚಿಕೊಂಡ ಇಬ್ಬರು ಪತ್ನಿಯರು!