ಪುಣೆ( ಮಹಾರಾಷ್ಟ್ರ): ಪುಣೆಯಲ್ಲಿ ಶತಮಾನಗಳ ಹಿಂದೆ ಕೆಡವಲಾದ ಎರಡು ದೇವಾಲಯಗಳ ಭೂಮಿಯಲ್ಲಿ ದರ್ಗಾಗಳನ್ನು ನಿರ್ಮಿಸಲಾಗಿದೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ಆರೋಪಿಸಿದೆ. ಪುಣ್ಯೇಶ್ವರ ಮತ್ತು ನಾರಾಯಣೇಶ್ವರ ದೇವಾಲಯಗಳನ್ನು ಖಿಲ್ಜಿ ದೊರೆಗಳು ನೆಲಸಮಗೊಳಿಸಿ ದರ್ಗಾಗಳಾಗಿ ಬದಲಾಯಿಸಿದರು ಎಂದು ಹೇಳಿದ್ದಾರೆ.
ಇದರ ನಡುವೆ ಅಯೋಧ್ಯಾ ಮತ್ತು ಜ್ಞಾನವಾಪಿ ಮಾದರಿಯಲ್ಲಿ ದೇವಾಲಯದ ಭೂಮಿ ಮುಕ್ತಗೊಳಿಸಲು ಎಂಎನ್‌ಎಸ್ 'ಪುಣ್ಯೇಶ್ವರ ಮುಕ್ತಿ' ಅಭಿಯಾನವನ್ನು ಪ್ರಾರಂಭಿಸಿದ್ದು, ಜನರ ಬೆಂಬಲವನ್ನು ಕೋರಿದೆ. ಕಾಶಿಯ ಜ್ಞಾನವಾಪಿ ಮಸೀದಿಯಂತೆಯೇ ಪುಣೆಯ ಎರಡು ದೇವಾಲಯಗಳ ಸ್ಥಳದಲ್ಲಿ ಛೋಟಾ ಶೇಖ್ ಮತ್ತು ಬಡಾ ಶೇಖ್ ಹೆಸರಿನಲ್ಲಿ ದರ್ಗಾಗಳನ್ನು ನಿರ್ಮಿಸಲಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಪ್ರಧಾನ ಕಾರ್ಯದರ್ಶಿ ಅಜಯ್ ಶಿಂಧೆ ಹೇಳಿದ್ದಾರೆ.
ಈ ದರ್ಗಾ ಪ್ರದೇಶದಲ್ಲಿ ಔರಂಗಜೇಬನ ಮೊಮ್ಮಗನ ಸಮಾಧಿಯೂ ಇದೆ. ಕುಂಬಾರವಾಡದಲ್ಲಿರುವ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾದ ಮಸೀದಿಗೆ ಛೋಟಾ ಶೇಖ್ ಎಂದು ಮತ್ತು ನಾರಾಯಣೇಶ್ವರ ಸ್ಥಳದಲ್ಲಿ ನಿರ್ಮಿಸಲಾದ ಮಸೀದಿಗೆ ಬಡಾ ಶೇಖ್ ದರ್ಗಾ ಎಂದು ಹೆಸರಿಸಲಾಗಿದೆ ಎಂದು ವಿವರಿಸಿದ್ದಾರೆ.
ಹಿಂದಿನ ಪುಣೆಯಲ್ಲಿನ ಕಸ್ಬಾ ಪ್ರದೇಶದಲ್ಲಿ ಮೂರು ದೇವಾಲಯಗಳಿದ್ದವು. ಮೂರನೇ ನಾಗೇಶ್ವರ ದೇವಸ್ಥಾನ ಸೋಮವಾರ ಪೇಠದಲ್ಲಿದ್ದು, ಅದೃಷ್ಟವಶಾತ್ ಇತಿಹಾಸದಲ್ಲಿ ಅದರ ಮೇಲೆ ದಾಳಿ ನಡೆದಿಲ್ಲ. ಎರಡೂ ದೇವಸ್ಥಾನಗಳ ಉದ್ಧಾರಕ್ಕಾಗಿ ನಾವು ಹಿಂದಿನಿಂದಲೂ ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹಿಂದೂ ಮಹಾಸಂಘವೂ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಈ ಎರಡು ದೇವಾಲಯಗಳಿಗೆ ಅರ್ಜಿ ಸಲ್ಲಿಸುತ್ತೇವೆ ಮತ್ತು ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ನಾವು ಈ ಪ್ರಕರಣವನ್ನು ನ್ಯಾಯಾಂಗ ರೀತಿಯಲ್ಲಿ ಹೋರಾಡುತ್ತೇವೆ ಎಂದು ಹಿಂದೂ ಮಹಾಸಂಘ ಅಧ್ಯಕ್ಷ ಆನಂದ್ ದವೆ ಹೇಳಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ರಾತ್ರಿ ಅಥವಾ ನಾಳೆ ಅಭ್ಯರ್ಥಿ ಘೋಷಣೆ, ಹೊರಟ್ಟಿ ವಿರುದ್ಧ ಅಭ್ಯರ್ಥಿ ಕಣಕ್ಕೆ - ಹೆಚ್ಡಿಕೆ