ಕಾನ್ಪುರ (ಉತ್ತರಪ್ರದೇಶ) : 2022ರಲ್ಲಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಸಮಾಜವಾದಿ ಪಕ್ಷ (ಎಸ್ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕಾನ್ಪುರದಲ್ಲಿ 'ಸಮಾಜವಾದಿ ವಿಜಯ ಯಾತ್ರೆ' ಹಾಗೂ ಮಥುರಾದಲ್ಲಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ಅವರು 'ಸಾಮಾಜಿಕ ಪರಿವರ್ತನಾ ಯಾತ್ರೆ'ಗೆ ಚಾಲನೆ ನೀಡಿದರು.
ಕಾನ್ಪುರದ ರಥಯಾತ್ರೆಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಗಂಗಾ ನದಿಯನ್ನ ಸ್ವಚ್ಛಗೊಳಿಸುವುದಾಗಿ 'ಗಂಗಾಮಯ್ಯ' (Ganga Maiya) ಯೋಜನೆ ಜಾರಿಗೆ ತಂದ ಯೋಗಿ ಆದಿತ್ಯನಾಥ್ರ ಬಿಜೆಪಿ ಸರ್ಕಾರ ಜನರಿಗೆ ದ್ರೋಹ ಮಾಡಿದೆ. ಗಂಗಾ ನದಿ ಮೊದಲಿನಂತೆಯೇ ಇನ್ನೂ ಕೊಳಕಾಗಿದೆ ಎಂದು ದೂಷಿಸಿದರು.
ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ತಾಲಿಬಾನ್ ಕೂಡ ಪ್ರಚಾರದಲ್ಲಿ ಅಸ್ತ್ರ!
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಇಲ್ಲಿನ ರೈತರಿಗೆ ಮೋಸ ಮಾಡಿದೆ, ಉದ್ಯೋಗಗಳನ್ನು ಕಸಿದುಕೊಂಡಿದೆ, ಹಣದುಬ್ಬರ ಹೆಚ್ಚಾಗಿದೆ. ಬಿಜೆಪಿ ರೈತರನ್ನು ತುಳಿಯಿತು ಮತ್ತು ಅವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಹತ್ತಿಕ್ಕುತ್ತಾರೆ ಎಂದು ಅಖಿಲೇಶ್ ಕಿಡಿ ಕಾರಿದರು.
ಸಮಾಜವಾದಿ ವಿಜಯ ರಥವು ಜನರ ಬಳಿಗೆ ಹೋಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಂತೆ ಮಾಡುತ್ತದೆ. ಬಿಜೆಪಿ ಸರ್ಕಾರದ ಭ್ರಷ್ಟ, ನಿರಂಕುಶ ಮತ್ತು ದಮನಕಾರಿ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಮತ್ತು ನಿಜವಾದ ಪ್ರಜಾಪ್ರಭುತ್ವ ಸ್ಥಾಪಿಸುವ ಭರವಸೆ ನೀಡುತ್ತದೆ. ಈ ರಥವು ರೈತರ ಹಕ್ಕುಗಳು ಮತ್ತು ಗೌರವವನ್ನು ಪುನಃ ಸ್ಥಾಪಿಸಲು ನಿರಂತರವಾಗಿ ಸಾಗುತ್ತಿರುತ್ತದೆ ಎಂದು ಭರವಸೆ ನೀಡಿದರು.