ಕೃಷ್ಣಾ (ಆಂಧ್ರಪ್ರದೇಶ): ಸೋಮವಾರ ಸಂಜೆ ಕೃಷ್ಣಾ ನದಿಯಲ್ಲಿ ಈಜು ಕಲಿಯಲು ತೆರಳಿ ನಾಪತ್ತೆಯಾಗಿದ್ದ ಐವರು ಬಾಲಕರು ಇಂದು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಏತೂರು ಗ್ರಾಮದ ಚರಣ್(13) , ಬಾಲ ಯೇಸು (12), ಅಜಯ್ (12), ರಾಕೇಶ್ (12) ಮತ್ತು ಸನ್ನಿ (12) ಎಂದು ಗುರುತಿಸಲಾಗಿದೆ.
ಮೃತ ಮಕ್ಕಳೆಲ್ಲ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದರು. ನಿನ್ನೆ ಸಂಜೆ ಕೃಷ್ಣಾ ನದಿಯ ಉಪನದಿಯಾದ ಮುನ್ನೇರುವಿನಲ್ಲಿ ಈಜು ಕಲಿಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಅಲ್ಲಿದ್ದ ಮೀನುಗಾರರು ನದಿ ಆಳವಾಗಿದೆ, ಮುಂದೆ ಮುಂದೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದರಂತೆ. ಆದರೆ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಬಾಲಕರು ಆಳವಿರುವ ಕಡೆ ಹೋಗಿದ್ದಾರೆ. ಸಂಜೆಯಾದರೂ ಮಕ್ಕಳು ಮನೆಗೆ ಬಾರದೆ ಇದ್ದುದರಿಂದ ಆತಂಕಗೊಂಡ ಪೋಷಕರು ಎಲ್ಲೆಂದರಲ್ಲಿ ಹುಡುಕಾಡಿದ್ದಾರೆ. ಮುಂಭಾಗದ ದಡದಲ್ಲಿ ಸೈಕಲ್, ಚಪ್ಪಲಿ, ಬಟ್ಟೆ ಸಿಕ್ಕಿದರೂ ಅವರು ಕಾಣಿಸಿರಲಿಲ್ಲ.
ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಐವರು ಬಾಲಕರ ನಾಪತ್ತೆ, ಶೋಧ ಕಾರ್ಯ ಮುಂದುವರಿಕೆ
ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಎನ್‌ಡಿಆರ್‌ಎಫ್ ತಂಡ, ಸ್ಥಳೀಯ ಈಜುಗಾರರು, ಮೀನುಗಾರರೊಂದಿಗೆ ತಡರಾತ್ರಿಯವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಬೆಳಗ್ಗೆ ನದಿ ಸಮೀಪ ಮರಳಿಗಾಗಿ ಅಗೆದಿದ್ದ ಗುಂಡಿಯಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ನಂದಿಗ್ರಾಮ ಉಪ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ವರ ರೆಡ್ಡಿ ತಿಳಿಸಿದ್ದಾರೆ.