2021ರ ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್ ಸಂಧು ಹಿಜಾಬ್ ಧರಿಸುವುದು ಮಹಿಳೆಯರ ಹಕ್ಕು. ಅದರ ಮೇಲೆ ಹೇರಿಕೆ ಸಲ್ಲದು ಎಂದೇಳುವ ಮೂಲಕ ಹಿಜಾಬ್ ಪರ ಧ್ವನಿ ಎತ್ತಿದ್ದಾರೆ. ಮಹಿಳೆಯರು ತಮ್ಮ ಇಷ್ಟದ ಜೀವನವನ್ನು ನಡೆಸಲು ಬಿಡಿ. ಅವರು ಹಾಕುವ ಬಟ್ಟೆಯ ಮೇಲೆ ಅವರನ್ನು ಅಳೆಯಬೇಡಿ. ಹಿಜಾಬ್ ಧರಿಸಿದರೆ ಅವರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ? ಎಂದು ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್ ಸಂಧು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬಳು ಹಿಜಾಬ್ ಧರಿಸಿ ನಮಾಜ್ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಹಿಜಾಬ್ ಬಗ್ಗೆ ಪ್ರಶ್ನಿಸಿದಾಗ ಹರ್ನಾಜ್ ಸಂಧು ಹಿಜಾಬ್ ಪರ ಮಾತನಾಡಿದ್ದಾರೆ. ಹಿಜಾಬ್ ವಿಷಯದಲ್ಲಿ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗಿದೆ.
ಮಹಿಳೆಯರು ತಾವು ಅಂದುಕೊಂಡಂತೆ ಬದುಕಲು ಬಿಡಿ. ಅವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಅದರಂತೆಯೇ ಜೀವನ ನಡೆಸಲು ಬಿಡಿ. ಅವಳನ್ನು ಹಾರಲು ಬಿಡಿ, ಅವರ ರೆಕ್ಕೆಯನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಹಿಜಾಬ್ ಧಾರಣೆ ತಪ್ಪಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠ ವಜಾಗೊಳಿಸಿ, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಾಲಾ-ಕಾಲೇಜುಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ತೀರ್ಪು ನೀಡಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿದೆ.
ಓದಿ: 'ಶರ್ಮಾಜಿ ನಮ್ಕೀನ್' ವಿಶೇಷ ಪ್ರದರ್ಶನದಲ್ಲಿ ಭಾಗಿಯಾದ ಬಾಲಿವುಡ್ ಸೆಲೆಬ್ರಿಟಿಗಳು